ಸಮಾಜದಲ್ಲಿನ ಜಾತೀಯತೆ ತೊಡೆದು ಹಾಕಲು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರು ತಮ್ಮ ಕ್ರಾಂತಿಗಳ ಮೂಲಕ ಶ್ರಮಿಸಿದ್ದಾರೆ. ಸಮಾಜದ ಸುಧಾರಣೆಗೆ ಅನೇಕ ನಾಯಕರ ಕೊಡುಗೆ ಇದೆ.
ಧಾರವಾಡ:
ಸಂವಿಧಾನದ ಮೂಲಕ ಡಾ. ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳಿಗೆ ವಿಶೇಷ ಹಕ್ಕು ನೀಡಿದ್ದು, ಮಹಿಳಾ ಸಬಲೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟರು.ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಬೆಂಗಳೂರಿನ ಡಾ. ಅಂಬೇಡ್ಕರ್ ತರಬೇತಿ ಸಂಶೋಧನಾ ವಿಸ್ತರಣಾ ಕೇಂದ್ರ ಮತ್ತು ಸಮಾಜ ಕಲ್ಯಾಣ ವಿಭಾಗಗಳ ಸಹಯೋಗದಲ್ಲಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಪ್ರಯುಕ್ತ ವಿಶ್ವನಾಯಕರಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಂಪರೆ ಮತ್ತು ಪ್ರಸ್ತುತತೆ ವಿಷಯದ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿನ ಜಾತೀಯತೆ ತೊಡೆದು ಹಾಕಲು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರು ತಮ್ಮ ಕ್ರಾಂತಿಗಳ ಮೂಲಕ ಶ್ರಮಿಸಿದ್ದಾರೆ. ಸಮಾಜದ ಸುಧಾರಣೆಗೆ ಅನೇಕ ನಾಯಕರ ಕೊಡುಗೆ ಇದೆ. ಬಸವೇಶ್ವರ ನಂತರ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ. ಅಂಬೇಡ್ಕರ್ ಅವರ ಮೌಲ್ಯಗಳನ್ನು ಅನುಸರಿಸುವ ಅವಶ್ಯಕತೆ ಇದೆ. ದಮನಿತ ವರ್ಗದ ನಿಜವಾದ ದೇವರು ಅಂಬೇಡ್ಕರ್ ಆಗಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಶೋಧನಾ ಲೇಖನಗಳ ‘ಪ್ರಜ್ಞಾ’ ಪುಸ್ತಕ ಸಂಶೋಧನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್. ಡಾ. ಸುರೇಶ ಗೌತಮ. ಡಾ. ಸುಭಾಷಚಂದ್ರ ನಾಟೀಕಾರ, ಕವಿವಿ ಕುಲಪತಿಗಳಾಗಿದ್ದ ಪ್ರೊ. ಎ.ಎಂ. ಖಾನ್, ಡಾ. ಶಂಕರ ವಣಿಕ್ಯಾಳ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರದೀಪಕುಮಾರ, ಸಿಂಡಿಕೇಟ್ ಸದಸ್ಯ ರಾಬರ್ಟ್ ದದ್ದಪೂರಿ, ಶ್ಯಾಮ ಮಲ್ಲನಗೌಡರ, ಮಹೇಶ ಹುಲ್ಲೆಪ್ಪನವರ, ಡಾ. ರವೀಂದ್ರ ಕಾಂಬಳೆ ಇದ್ದರು.