ಕನ್ನಡಪ್ರಭ ವಾರ್ತೆ ಬೀದರ್
ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಸಂವಿಧಾನ ರಚನೆಗೆ ಸೀಮಿತವಾಗದೇ, ಸಮಾನತೆ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸದೃಢ ಅಡಿಪಾಯವಾಗಿವೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ನುಡಿದರು.ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶ, ಬೀದರ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದ ಸಹಯೋಗದೊಂದಿಗೆ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಲಾಮೂರ್ತಿ ಅನಾವರಣ ಹಾಗೂ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಡಾ.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ದೇಶಕ್ಕೆ ವಿಶ್ವದ ಶ್ರೇಷ್ಠ ಸಂವಿಧಾನ ದೊರೆತಿದ್ದು, ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.ಸದರಿ ತಾಂತ್ರಿಕ ಸಮ್ಮೇಳನದ ವಿಶೇಷ ಅತಿಥಿ ಉಪನ್ಯಾಸಕರಾದ ಕಲಬುರಗಿ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ ಉಪನ್ಯಾಸ ನೀಡಿ ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳು, ಭಾರತೀಯ ಸಂವಿಧಾನದ ರೂಪುರೇಷೆ ಹಾಗೂ ಸಮಕಾಲೀನ ಸಮಾಜದಲ್ಲಿ ಅವರ ಚಿಂತನೆಗಳ ಪ್ರಸ್ತುತತೆಯನ್ನು ವಿಶ್ಲೇಷಿಸಿದ ಅವರು ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನಿರ್ಮಿಸುವುದರಿಂದ ವಿಕಸಿತ ಭಾರತದ ಪರಿಕಲ್ಪನೆ ಸಾಧ್ಯವೆಂಬ ಸಂದೇಶವನ್ನು ಡಾ.ಅಂಬೇಡ್ಕರ್ ಅವರು ಅಂದಿನ ದಿನಗಳಲ್ಲೇ ನೀಡಿದ್ದರು ಎಂದು ಅಭಿಪ್ರಾಯಪಟ್ಟರು.
ವ್ಯವಸ್ಥಾಪಕ ಮಂಡಳಿ ಸದಸ್ಯರು ಹಾಗೂ ಪ.ಜಾ. ಮತ್ತು ಪ.ಪಂ. ಉಪಸಮಿತಿ ಅಧ್ಯಕ್ಷರಾದ ಡಾ.ವೆಂಕಟಾಚಲ ವಿ.ಎಸ್. ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಉದ್ದೇಶದಿಂದ ತಾಂತ್ರಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಡಾ. ಹೆಚ್.ಎಂ.ಜಯಪ್ರಕಾಶ್, ಲತಾ ಡಿ.ಎಚ್., ಬಸವರಾಜ ಭತಮುರ್ಗೆ ಹಾಗೂ ಸಂಗಪ್ಪ ವಾಲಿಕಾರ, ಪಶುವೈದ್ಯಕೀಯ ಮಹಾವಿದ್ಯಾಲಯ ಭಾವುರಾವ್ ದೇಶಪಾಂಡೆ ಇದ್ದರು.
ಅಥಣಿ ಕಾಲೇಜಿನ ಡೀನ್ ಡಾ. ಗಂಗಾನಾಯಕ ಪ್ರಾಸ್ತಾವಿಕ ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ, ಪಿ.ಟಿ.ರಮೇಶ ಸ್ವಾಗತಿಸಿದರು. ಡಾ. ಚನ್ನಪ್ಪಗೌಡ ಬಿರಾದಾರ ನಿರೂಪಿಸಿದರೆ ಡಾ. ಸಂಜೀವಕುಮಾರ ಎಂ. ಹಾಗೂ ಡಾ. ಭಗವಂತಪ್ಪ ವಂದಿಸಿದರು.
ಸದರಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳ ಡೀನಗಳು, ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.--
ಚಿತ್ರ 11ಬಿಡಿಆರ್56:ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಲಾಮೂರ್ತಿ ಅನಾವರಣ ಸಮಾರಂಭ ಜರುಗಿತು.
--