ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಜಾಗದ ವಿಚಾರವಾಗಿ ಕೆ.ಶೆಟ್ಟಹಳ್ಳಿ ಗ್ರಾಮದ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತವಾರಣ ನಿರ್ಮಾಣವಾಯಿತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಜಾಗದ ವಿಚಾರವಾಗಿ ಕೆ.ಶೆಟ್ಟಹಳ್ಳಿ ಗ್ರಾಮದ ದಲಿತರು ಹಾಗೂ ಸವರ್ಣೀಯರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತವಾರಣ ನಿರ್ಮಾಣವಾಯಿತು.ತಳ್ಳಾಟ ನೂಕಾಟದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ಗೆ ಹಾನಿಯಾಗಿರುವ ಘಟನೆ ಸಂಭವಿಸಿದ್ದು ಕೂಡಲೇ ಘಟನೆ ಬಗ್ಗೆ ಎಚ್ಚೆತ್ತ ಸ್ಥಳೀಯ ತಾಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ ನೇತೃತ್ವದಲ್ಲಿ ಸಭೆ ನಡೆಸಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲಾಯಿತು.
ಘಟನೆಯ ವಿವರ:ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಶ್ರೀಬೊಮ್ಮಲಿಂಗೇಶ್ವರ ದೇವಾಲಯದ ಟ್ರಸ್ಟ್ ಹೆಸರಿನಲ್ಲಿರುವ ಜಾಗದಲ್ಲಿ ಸಸಿ ನೆಡುವ ಸಂದರ್ಭದಲ್ಲಿ ದಲಿತರು ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಜಾಗ ನೀಡುವಂತೆ ಸಸಿ ನೆಡುವ ಕಾರ್ಯವನ್ನು ತಡೆದು ಪ್ರತಿಭಟನೆ ನಡೆಸುವ ವೇಳೆ ಸವರ್ಣೀಯರು ಹಾಗೂ ದಲಿತರ ನಡುವೆ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಗುಂಪನ್ನು ಚದುರಿಸಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಎಚ್ಚರ ವಹಿಸಿ ಪೊಲಿಸ್ ತುಕಡಿಗಳನ್ನು ಗ್ರಾಮಕ್ಕೆ ಕರೆಸಿದರು. ಘಟನೆ ವಿಕೋಪಕ್ಕೆ ತಿರುಗಿತ್ತಿದ್ದಂತೆ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದರು.ಈ ವೇಳೆ ಎರಡು ಕೋಮಿನವರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಏರು ದ್ವನಿಯಲ್ಲಿ ಮಾತನಾಡುತ್ತಿದ್ದ ಉಭಯ ಸಮುದಾಯದವರನ್ನು ಪೊಲೀಸರು ಗದರಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಬಳಿಕ ತಹಸೀಲ್ದಾರ್ ಪರಶುರಾಮ ಸತ್ತಿಗೆರೆ, ತಾಪಂ ಸಿಒ ರಾಮಲಿಂಗಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಾಗರಾಜುರವರ ನೇತೃತ್ವದಲ್ಲಿ ಗ್ರಾಪಂ ಆವರಣದಲ್ಲಿ ಗ್ರಾಮದ ಎರಡೂ ಸಮುದಾಯಗಳ ಹಾಗೂ ಸಂಘಟನೆ ಮುಖಂಡರ ಸಭೆ ನಡೆಸಲಾಯಿತು.ಈ ವೇಳೆ ಸಭೆಯಲ್ಲಿ ಗುಂಡು ಕಟ್ಟೆ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು 5 ಗುಂಟೆ ಜಾಗವನ್ನು ನೀಡಬೇಕೆಂದು ಗ್ರಾಪಂ ದಲಿತ ಕಾಲೋನಿ ನಿವಾಸಿಗಳು ಮನವಿ ಮಾಡಿದ್ದರು. ಅದನ್ನು ಗ್ರಾಪಂ ಆಡಳಿತ ಮಂಡಳಿ ತಿರಸ್ಕರಿಸಿ ಶ್ರೀಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿ 30 ಗುಂಟೆ ಜಾಗವನ್ನು ಖಾತೆ ಮಾಡಿಕೊಟ್ಟು ನಮ್ಮ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಆಡಳಿತ ಮಂಡಳಿಯ ಅನುಮೋದನೆ ಪಡೆಯದೆ ಅಕ್ರಮವಾಗಿ ಖಾತೆ ಮಾಡಿದ್ದು ಗುಂಡು ಕಟ್ಟೆ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಬಗ್ಗೆ ಹಾಗೂ ಖಾತೆ ರದ್ದುಪಡಿಸಿ ಆ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.ದಲಿತರ ದೂರಿನ ಬಗ್ಗೆ ಸರ್ವಣೀಯ ಸಮುದಾಯ ಮುಖಂಡರು ಆಕ್ಷೇಪಣೆ ವ್ಯಕ್ತಪಡಿಸಿ, ನಾವು ಗ್ರಾಮದಲ್ಲಿ ಯಾವುದೇ ಜಾತಿ-ಬೇಧಗಳಿಲ್ಲದೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದೇವೆ. ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀಬೊಮ್ಮಲಿಂಗೇಶ್ವರ ದೇವಾಲಯವಿದ್ದು, ವರ್ಷಕ್ಕೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರಿಗೆ ಸೂಕ್ತ ಅನುಕೂಲವಾಗುವ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದೇವಸ್ಥಾನದ ಸುತ್ತ ತಂತಿ ಅಳವಡಿಸಿದ್ದೇವೆ ಎಂದರು.
ಶ್ರೀಬೊಮ್ಮಲಿಂಗೇಶ್ವರ ದೇವಾಲಯದ ಹೆಸರಿನಲ್ಲಿ ಕಾನೂನು ಪ್ರಕಾರವೇ ಖಾತೆ ಮಾಡಲಾಗಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸದೆ ಮತ್ತೊಂದು ಸ್ಥಳವನ್ನು ಕಲ್ಪಿಸಿಕೊಡಬೇಕು ಹಾಗೂ ಗ್ರಾಮದಲ್ಲಿ ಸಾಮರಸ್ಯ ಕಾಪಾಡಲು ಅಧಿಕಾರಿಗಳು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಬಳಿಕ ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ ಮಾತನಾಡಿ, ತಲಾ ತಲಾಂತರಗಳಿಂದ ಎರಡು ಕೋಮಿನವರು ಗ್ರಾಮದಲ್ಲಿ ಅನೋನ್ಯವಾಗಿದ್ದ ರೀತಿ ಮುಂದೆಯೂ ಇರಬೇಕು. ಯಾವುದೇ ಕಾರಣಕ್ಕೂ ಗಲಭೆಗೆ ಆಸ್ಪದ ನೀಡಬೇಡಿ. ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಡಿ.20ರಂದು ಮದ್ದೂರಿನ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮದ ಎರಡು ಸಮುದಾಯದ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ. ಅಲ್ಲಿಯವರೆಗೆ ಎರಡೂ ಸಮುದಾಯಗಳು ಯಾವುದೇ ಪ್ರಚೋದನೆಗೂ ಒಳಗಾಗಬೇಡಿ ಎಂದು ಕಿವಿ ಮಾತು ಹೇಳಿದರು.ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎರಡು ಕೋಮಿನವರು ಸಹ ಗ್ರಾಮದಲ್ಲಿ ಶಾಂತಿ ನೆಲೆಸಲು ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಯಾವುದೇ ಪ್ರಚೋದನೆಗೆ ಒಳಗಾಗದೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.