ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಾರೆ

| Published : Nov 22 2025, 02:00 AM IST

ಸಾರಾಂಶ

ಪ್ರಪಂಚದ ಸರ್ವಶ್ರೇಷ್ಠ ಭಾರತ ಸಂವಿಧಾನವನ್ನು ಬರೆದವರು ಬಾಬಾ ಸಾಹೇಬ್ ಡಾ. ಬಿ.ಆರ್‌. ಅಂಬೇಡ್ಕರ್ ಒಬ್ಬರೇ ಎಂದು ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಪ್ರಪಂಚದ ಸರ್ವಶ್ರೇಷ್ಠ ಭಾರತ ಸಂವಿಧಾನವನ್ನು ಬರೆದವರು ಬಾಬಾ ಸಾಹೇಬ್ ಡಾ. ಬಿ.ಆರ್‌. ಅಂಬೇಡ್ಕರ್ ಒಬ್ಬರೇ ಎಂದು ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ತಿಳಿಸಿದರು.

ರಂಗವಾಹಿನಿ ಸಂಸ್ಥೆಯು ಭೋಗಾಪುರ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಅಂಬೇಡ್ಕರ್ ಹಬ್ಬ -2025 ಅಂಗವಾಗಿ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಅಂಬೇಡ್ಕರ್ ಒಬ್ಬರೇ ಸಂವಿಧಾನ ಶಿಲ್ಪಿ ಅಲ್ಲ ಇವರ ಜೊತೆ ಅನೇಕರು ಸೇರಿ ಸಂವಿಧಾನವನ್ನು ಬರೆದಿದ್ದಾರೆ ಎಂಬ ಕಿಡಿಗೇಡಿಗಳ ಹೇಳಿಕೆಗಳನ್ನು ಖಂಡಿಸಿದ ಅವರು, ಇದು ಅಂಬೇಡ್ಕರ್ ಅವರ ಪ್ರಾಮುಖ್ಯತೆಯನ್ನು ನಗಣ್ಯ ಮಾಡುವ ಅಂಬೇಡ್ಕರ್ ವಿರೋಧಿ ಅಜೆಂಡವಾಗಿದೆ.

ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳು ಒಂದೊಂದು ಕಾರಣದಿಂದಾಗಿ ದೂರವೇ ಉಳಿದರು. ಅಂಬೇಡ್ಕರ್ ಅವರ ವಿಶೇಷ ಬದ್ಧತೆ ಮತ್ತು ವಿದ್ವತ್ತುಗಳಿಂದಾಗಿ ಭಾರತದ ಸಂವಿಧಾನವನ್ನು ಜನಮುಖಿಯಾಗಿ ರಚಿಸಲು ಸಂಪೂರ್ಣ ಜವಾಬ್ದಾರಿ ಹೊತ್ತವರು ಅಂಬೇಡ್ಕರ್ ಎಂದು ಸಂವಿಧಾನ ರಚನಾ ಸಮಿತಿಯ ಸದಸ್ಯರಲೊಬ್ಬರಾದ ಟಿ.ಟಿ ಕೃಷ್ಣಮಾಚಾರಿ ಅವರೇ ಖುದ್ದು ರಚನಾ ಸಭೆಯಲ್ಲಿ ಮಂಡಿಸಿದ್ದು, ಸಂವಿಧಾನ ರಚನಾ ಸಭೆಯ ನಡಾವಳಿಯಲ್ಲಿ ಇದು ದಾಖಲಾಗಿದೆ. ಇತಿಹಾಸದ ಸತ್ಯ ಹೀಗಿದ್ದರೂ, ಇತ್ತೀಚೆಗೆ ವಾಟ್ಸಾಪ್ ಯೂನಿವರ್ಸಿಟಿಯ ಭಕ್ತರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿರುಚುವಲ್ಲಿ ಸಕ್ರಿಯರಾಗಿದ್ದಾರೆ. ಇದು ಚರಿತ್ರೆಯನ್ನು ತಿರುಚುವ ಮತ್ತು ಅಂಬೇಡ್ಕರ್ ಅವರ ವಿದ್ವತ್ತಿಗೆ ಮಸಿ ಬಳಿಯುವ ಕೆಲಸವಾಗಿದೆ. ಇದನ್ನು ದೇಶ ವಿರೋಧಿ ಕೃತ್ಯವೆಂದು ಪರಿಗಣಿಸಿ ಸರ್ಕಾರಗಳು ಇವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಇಂತಹ ಸುಳ್ಳು ಸುದ್ದಿಗಳನ್ನು ಪರಿಶೀಲಿಸದೆ ಜಾಲತಾಣಗಳಲ್ಲಿ ಹರಡಬೇಡಿ ಎಂದು ಕಿವಿ ಮಾತು ಹೇಳಿದರು.

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಭಾರತದ ಸಂವಿಧಾನದ ಪೀಠಿಕೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ಮಾರ್ಗದರ್ಶಿ ತತ್ವಗಳನ್ನು ವಿವರಿಸುವ ಸಂಕ್ಷಿಪ್ತ ಪರಿಚಯಾತ್ಮಕ ಹೇಳಿಕೆಯಾಗಿದೆ. ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಇತರ ಹಕ್ಕುಗಳನ್ನು ನೀಡಿದ ಭಾರತ ಭಾಗ್ಯವಿಧಾತ ಎಂದು ಬಣ್ಣಿಸಿದರು.

ಪ್ರಾಂಶುಪಾಲ ಡಾ. ಪಿ.ದೇವರಾಜು ಮಾತನಾಡಿ, ಜಗತ್ತಿನಾದ್ಯಂತ ವಿದ್ವತ್ ಲೋಕ ಅಂಬೇಡ್ಕರ್ ಅವರನ್ನು ಇಂದು ಓದ ತೊಡಗಿದೆ. ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾ ಅಂತಹ ಮಹಾನ್ ವ್ಯಕ್ತಿಗಳು ಜಗತ್ತಿನ ತುಳಿತಕ್ಕೊಳಗಾದ ಎಲ್ಲರೂ ಸಾಮಾಜಿಕ ನ್ಯಾಯ ಮತ್ತು ಆತ್ಮ ಗೌರವ ಎತ್ತಿ ಹಿಡಿಯಲು ಭಾರತದ ಸಂವಿಧಾನ ಮತ್ತು ಅಂಬೇಡ್ಕರನ್ನು ನೆನಯಲೇಬೇಕು ಎಂದು ಹೇಳಿದ್ದಾರೆ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ರಂಗವಾಹಿನಿ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ, ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಅಂಬೇಡ್ಕರ್ ಹಬ್ಬ, ಅಂಬೇಡ್ಕರ್ ಮತ್ತು ಸಂವಿಧಾನ, ಅಂಬೇಡ್ಕರ್ ಮತ್ತು ಮಹಿಳೆ ಅಂಬೇಡ್ಕರ್ ಮತ್ತು ಕಾನೂನು ಕುರಿತು ವಿಚಾರ ಸಂಕಿರಣ, ಅಂಬೇಡ್ಕರ್ ಕುರಿತು ಪ್ರಬಂಧ ಸ್ಪರ್ಧೆ , ಅಂಬೇಡ್ಕರ್ ಹಾಡು ಹಬ್ಬ ಮತ್ತು ಬೆಲ್ಲದ ದೋಣಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ನಿಸರ್ಗ ಟ್ರಸ್ಟ್ ನ ನಾಗರಾಜು, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ರಮೇಶ್ ಬಾಬು, ರಂಗಸ್ವಾಮಿ, ದೀಪಕ್ ವಿಲ್ಸನ್ ಯಶೋಧಾ ದೇವಿ, ಸುದರ್ಶನ್, ಹಸನ್ ಮಹಮದ್ ಉಪಸ್ಥಿತರಿದ್ದರು. ಪೂಜಾ ಮತ್ತು ಸಂಗಡಿಗರು ಅಂಬೇಡ್ಕರ್ ಮತ್ತು ಬುದ್ಧನ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು.