ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ರಮೇಶ ಬಂಡಿಸಿದ್ದೇಗೌಡ

| Published : Nov 22 2025, 02:00 AM IST

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಗಲು- ರಾತ್ರಿ ಎನ್ನದೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೂಡಿ ಪಕ್ಷಕ್ಕಾಗಿ ದುಡಿದಿದ್ದಾರೆ. ಸರ್ಕಾರ ಬರಲು ಕಾರಣರಾಗಿದ್ದಾರೆ. ಹೀಗಾಗಿ ಡಿಕೆಶಿ ಮುಖ್ಯ ಮಂತ್ರಿ ಆಗಬೇಕು ಎಂದು ಕೇಳುವುದರಲ್ಲಿ ತಪ್ಪೇನಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾಂಗ್ರೆಸ್ ಸರ್ಕಾರದಲ್ಲಿ ನನಗೂ ಮಂತ್ರಿಯಾಗಬೇಕು ಎಂಬ ಆಸೆ ಇದೆ. ಇದೇ ರೀತಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಕೂಡ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ. ಇದರಲ್ಲಿ ತಪ್ಪೇನಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಪಶು ಸಂಗೋಪನ ಇಲಾಖೆಯಿಂದ ನಡೆದ ನೂತನ ಪಶು ಆಸ್ಪತ್ರೆ ನಿರ್ಮಾಣ ಹಾಗೂ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಗಲು- ರಾತ್ರಿ ಎನ್ನದೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೂಡಿ ಪಕ್ಷಕ್ಕಾಗಿ ದುಡಿದಿದ್ದಾರೆ. ಸರ್ಕಾರ ಬರಲು ಕಾರಣರಾಗಿದ್ದಾರೆ. ಹೀಗಾಗಿ ಡಿಕೆಶಿ ಮುಖ್ಯ ಮಂತ್ರಿ ಆಗಬೇಕು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದರು.

ರಾಜ್ಯದ 136 ಕೈ ಶಾಸಕರು ಕೂಡ ಡಿ.ಕೆ.ಶಿವಕುಮಾರ್ ಜೊತೆಗಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಎಲ್ಲವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ತಾವು ಸೇರಿದಂತೆ ಎಲ್ಲಾ ಶಾಸಕರೂ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ. ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬೇಕು ಎಂದು ರಮೇಶ ಬಂಡಿಸಿದ್ದೇಗೌಡ ಡಿಸಿಎಂ ಪರ ಧ್ವನಿ ಎತ್ತಿದರು.

ಈ ವೇಳೆ ಅರಕೆರೆ ಸಂತೋಷ್, ಉದಯಕುಮಾರ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ಶಿವಯ್ಯ, ಮಹದೇವಪುರ ಬಸವರಾಜು, ರವಿ, ಹುರುಳಿಕ್ಯಾತನಹಳ್ಳಿ ಶಿವಕುಮಾರ್, ಮೇಳಾಪುರದ ಲಕ್ಮಣ್ ಸೇರಿ ಗ್ರಾಪಂ ಅಧ್ಯಕ್ಷರು ಸದಸ್ಯರು, ಮುಖಂಡರು ಇತರರು ಹಾಜರಿದ್ದರು.