ಸಾರಾಂಶ
- ಚಿತ್ರಕಲಾ ಸ್ಪರ್ಧೆ, ಯುಕೊವಾ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಡಾ.ಜೈರಾಜ್- - - ಕನ್ನಡಪ್ರಭ ವಾರ್ತೆ ಹರಿಹರ ವೈದ್ಯ, ಸಾಫ್ಟ್‌ವೇರ್ ಎಂಜಿನಿಯರಂತಹ ವೃತ್ತಿಯಲ್ಲಿ ಇರುವವರಷ್ಟೇ ಆದಾಯ ಗಳಿಸುವ ಸಾಮರ್ಥ್ಯ ಚಿತ್ರಕಲಾವಿದರಿಗೂ ಇದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ್ ಚಿಕ್ಕಪಾಟೀಲ್ ಹೇಳಿದರು.
ನಗರದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಕಾಲೇಜಿನ ವಜ್ರ ಮಹೋತ್ಸವ ಸಂಭ್ರಮ ಪ್ರಯುಕ್ತ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಯುಕೊವಾ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಎಲ್ಲಿಯೂ ಸಲ್ಲದವರು ಚಿತ್ರ ಕಲಾವಿದರಾಗುತ್ತಾರೆ ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿದೆ. ಆದರೆ, ಎಲ್ಲರೂ ಕಲಾವಿದರಾಗಿ ಬೆಳೆಯಲು ಸಾಧ್ಯವಿಲ್ಲ. ಕಲೆ ಎಂಬ ವಿಶೇಷ ನೈಪುಣ್ಯತೆ ಇರುವವರಿಗೆ ಮಾತ್ರ ಇದು ಸಾಧ್ಯ. ನಮ್ಮ ಕಾಲೇಜಿನಲ್ಲಿ ಪದವಿ, ಸ್ನಾತ್ತಕೋತ್ತರ ಪದವಿ ಪಡೆದವರು ಒಬ್ಬ ವೈದ್ಯ, ಎಂಜಿನಿಯರ್ ಪಡೆಯುವ ಸಂಬಳಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಿದರೆ ಖಾಸಗಿ ಶಾಲೆಗಳಿಗಿಂತ ಹೆಚ್ಚು ಆಕರ್ಷಕವಾಗಿ ಸರ್ಕಾರಿ ಶಾಲೆ ಜನಮನ ಸೆಳೆಯಲು ಸಾಧ್ಯ ಎನ್ನಲು ಈ ಶಾಲೆ ಉತ್ತಮ ಉದಾಹರಣೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿ, ಶಾಲೆಯ ಭೌತಿಕ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಎಲ್ಲ ಸಹಕಾರ ನೀಡಲು ಸಾಧ್ಯ. ಚಿತ್ರಕಲಾ ಶಿಕ್ಷಕ ಪಿ.ನಾಗರಾಜ್ ಅವರು ಈ ಶಾಲೆಗೆ ಬಂದಾಗಿನಿಂದ ಶಾಲೆಯ ಭೌತಿಕ ಚಹರೆ ಬದಲಾಗಿದೆ ಎಂದರು.
ಆಕಾರ್ ಸಂಸ್ಥೆ ಕಲಾವಿದ ರಾಮೂ ಆಕಾರ್ ಮತ್ತು ದೃಶ್ಯಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಗಿರೀಶ್ ಕುಮಾರ್ ಕ್ಲೇ ಮಾಡಲಿಂಗ್, ನಾಗರಾಜ್ ಬಡಿಗೇರ್ ಪೇಪರ್ ಕ್ರ್ಯಾಫ್ಟ್, ಡಾ.ಸಂತೋಷ್ ಕುಮಾರ್ ಕುಲಕರ್ಣಿ ನಿಸರ್ಗ ಚಿತ್ರಣ, ಚಂದ್ರಶೇಖರ್ ಸಂಗ ಫೈಬರ್ ಮೌಲ್ಡಿಂಗ್, ಕುಮಾರ್ ವೈ. ಅವರು ಮೂರ್ತಿ ಶಿಲ್ಪದ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನೀಡಿದರು.ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕರಿಬಸಪ್ಪ ಜಿ.ಎನ್., ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ, ಚಿತ್ರ ಕಲಾವಿದ ವೆಂಕಟೇಶ್, ದಾವಣಗೆರೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನಾಗಭೂಷಣ್, ಪ್ರಭಾರ ಮುಖ್ಯ ಶಿಕ್ಷಕ ಶ್ರೀಧರ್ ಮಯ್ಯ, ಶಿಕ್ಷಕರಾದ ಪಿ,ನಾಗರಾಜ್, ಮಂಜುನಾಥ್ ಆಡಿನ್, ರವೀಂದ್ರನಾಥ್, ರೀನಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಿದ್ದರು.
- - -ಕೋಟ್ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಿಕಾ ವಾತಾವರಣ ಇರುವುದನ್ನು ಮೊದಲ ಬಾರಿ ನೋಡಿದೆ. ಶಾಲೆಯಲ್ಲಿ ಆರ್ಟ್ ಗ್ಯಾಲರಿ ಮಾಡಿರುವುದು ಶ್ಲಾಘನೀಯ. ಇದರಿಂದ ಮಕ್ಕಳಿಗೆ ಚಿತ್ರಕಲೆ ಕಲಿಯಲು ಸೂಕ್ತ ವೇದಿಕೆ ತೆರೆದಂತಾಗಿದೆ. ಶಾಲೆಯ ಚಿತ್ರಕಲಾ ಶಿಕ್ಷಕ ಪಿ.ನಾಗರಾಜ್ ಶ್ರಮ ಸಾರ್ಥಕವಾಗಿದೆ
- ಡಾ. ಜೈರಾಜ್ ಚಿಕ್ಕಪಾಟೀಲ್, ಪ್ರಾಚಾರ್ಯ- - - -28ಎಚ್‍ಆರ್‍ಆರ್ 01:
ಹರಿಹರದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ, ಯುಕೊವಾ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಗಣ್ಯರು ಚಿತ್ರಕಲೆಗಾರಿಕೆ ವೀಕ್ಷಿಸಿದರು.