ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಮಕ್ಕಳ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟಿದ್ದಾರೆ.ಕೊಡಗು ವಿಶ್ವವಿದ್ಯಾಲಯ, ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು, ನಾವು ಪ್ರತಿಷ್ಠಾನ, ಸೋಮವಾರಪೇಟೆ ಸಹಯೋಗದಲ್ಲಿ ಮಕ್ಕಳ ಹಕ್ಕುಗಳನ್ನು ಕುರಿತು ‘ಕಲ್ಪನೆಯಿಂದ ಸಾಧ್ಯತೆಡೆಗೆ ಮಕ್ಕಳ ಹಕ್ಕುಗಳು’ ಪರಿಚಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳ ಹಕ್ಕುಗಳನ್ನು ಎಲ್ಲೆಡೆ ಜಾರಿ ಆಗುವಂತೆ ಮಾಡಲು ಯುವ ಸಮುದಾಯಗಳಿಗೆ ಅರ್ಥೈಸುವ ಮತ್ತು ಅನುಷ್ಠಾನಗೊಳಿಸುವ ಪರಿಚಯ ಕಾರ್ಯಾಗಾರಗಳು ನಿರಂತರ ನಡೆಯುತ್ತಿರಬೇಕು. ಪ್ರತೀ ಮಗುವಿನ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮೊದಲಾದ ಮೂಲಭೂತ ಮಾನವ ಹಕ್ಕುಗಳನ್ನು ಸಮರ್ಪಕವಾಗಿ ಒದಗಿಸುವಂತಹ ಕಾರ್ಯಗಳು ನಿರಂತರ ನಡೆಯುತ್ತಿರಬೇಕು ಎಂದರು.
ಪರಿಚಯ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಡಾ. ವಾಸುದೇವ ಶರ್ಮಾ ಎನ್.ವಿ. ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆ, ಸುರಕ್ಷಿತ ಕುಡಿಯುವ ನೀರು, ಪೌಷ್ಟಿಕ ಆಹಾರ, ಸ್ವಚ್ಛ ಮತ್ತು ಸುರಕ್ಷಿತ ಪರಿಸರ, ಮಕ್ಕಳು ಆರೋಗ್ಯವಾಗಿರಲು ಸಹಾಯ ಮಾಡುವ, ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಮಾಹಿತಿ ಹಕ್ಕುಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು, ಸುಮನ್ ಮ್ಯಾಥ್ಯೂ ಪಿ., ಸಿ.ಆರ್.ಟಿಯ ಡಾ. ಪದ್ಮಿನಿ, ಸಮಾಜಕಾರ್ಯ, ರಾಜ್ಯಶಾಸ್ತ್ರ ಹಾಗೂ ಕನ್ನಡ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಲೋಕೇಶ್ ಭರಣಿ ನಿರ್ವಹಿಸಿದರು. ಸಹನಾ ಮತ್ತು ಕ್ಯಾರೋಲಿನ್ ಪ್ರಾರ್ಥಿಸಿದರು.