ಸಾರಾಂಶ
- ಚನ್ನಗಿರಿ ತಾಲೂಕು ಕಚೇರಿಯಲ್ಲಿ ದಾರ್ಶನಿಕರ ಜಯಂತಿಗಳ ಕುರಿತು ಪೂರ್ವಭಾವಿ ಸಭೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಸರ್ಕಾರವು ದಾರ್ಶನಿಕರ, ಶರಣರ, ಮಹಾಪುರುಷರ ಜಯಂತಿಗಳನ್ನು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಆಚರಣೆ ಮಾಡಬೇಕು ಎಂದು ಆದೇಶ ನೀಡಿದೆ. ಆದರೂ, ಕೆಲ ಜಯಂತಿ ಕಾರ್ಯಕ್ರಮಗಳು ತಾಲೂಕು ಕಚೇರಿಗೆ ಮಾತ್ರವೇ ಸೀಮಿತವಾಗಿದೆ ಎಂದು ತಾಲೂಕು ಮಡಿವಾಳ ಸಮಾಜ ಅಧ್ಯಕ್ಷ ಗುಡ್ಡಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಫೆಬ್ರವರಿಯಲ್ಲಿ ಬರುವ ಮಡಿವಾಳ ಮಾಚಿದೇವ, ಸವಿತ ಮಹರ್ಷಿ ಹಾಗೂ ಕಾಯಕ ಶರಣರ ಜಯಂತಿಗಳನ್ನು ಆಚರಣೆ ಮಾಡಲು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಆರೋಪಿಸಿದರು.
ತಾಲೂಕಿನ ಗ್ರಾಮ ಪಂಚಾಯಿತಿಗಳ ಕಚೇರಿಗಳಲ್ಲಾಗಲಿ, ಇತರೆ ಸರ್ಕಾರಿ ಕಚೇರಿಗಳಲ್ಲಿ ಮಹನೀಯರುಗಳ ಜಯಂತಿಗಳನ್ನು ಸರಿಯಾಗಿ ಆಚರಿಸುತ್ತಿಲ್ಲ. ನಾವು ಪ್ರತಿ ಬಾರಿ ಕರೆಯುವ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಸವಿತ ಸಮಾಜ ಅಧ್ಯಕ್ಷ ರಂಗನಾಥ್ ಮಾತನಾಡಿ, ಸಣ್ಣ-ಪುಟ್ಟ ಸಮಾಜಗಳ ದಾರ್ಶನಿಕರ, ಶರಣರ ಜಯಂತಿಗಳೆಂದರೆ ಅಧಿಕಾರಿಗಳಿಗೆ ತಾತ್ಸಾರವಾಗಿದೆ. ದಾರ್ಶನಿಕರ ಜಯಂತಿಗಳನ್ನು ತಾಲೂಕು ಕಚೇರಿಯಲ್ಲಿ ಮಾತ್ರ ಆಚರಣೆ ಮಾಡುತ್ತಾರೆ ಆದರೆ, ಬೇರೆ ಕಚೇರಿಗಳಲ್ಲಿ ಜಯಂತಿ ಆಚರಣೆ ಇರಲಿ, ಅವರ ಪೋಟೋಗಳೇ ಎಲ್ಲಿಯೂ ಕಾಣುವುದಿಲ್ಲ. ಸರ್ಕಾರದ ಆದೇಶದಂತೆ ಜಯಂತ್ಯುತ್ಸವಗಳನ್ನು ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು. ಇಲ್ಲವಾದರೆ ಅ ಕಚೇರಿಗಳ ಮುಂದೆ ಸಮಾಜ ಬಾಂಧವರು ಸೇರಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, ಸರ್ಕಾರದ ದೃಷ್ಠಿಯಲ್ಲಿ ಎಲ್ಲರೂ ಸಮಾನರಾಗಿದ್ದು ದೊಡ್ಡ ಸಮಾಜಗಳಿಗೆ ಒಂದು, ಸಣ್ಣ ಸಮಾಜಗಳಿಗೆ ಒಂದು ಎಂದು ತಾರತಮ್ಯ ಮಾಡುವುದಿಲ್ಲ. ಈ ದಿನವೇ ತಾಲೂಕಿನಲ್ಲಿರುವ ಎಲ್ಲ ಸರ್ಕಾರಿ ಇಲಾಖೆಗಳಿಗೆ ಕಡ್ಡಾಯವಾಗಿ ಜಯಂತಿ ಆಚರಿಸಲು ನೋಟೀಸ್ ನೀಡಲಾಗುವುದು. ಫೆ.1ರಂದು ಮಡಿವಾಳ ಮಾಚಿದೇವರ ಜಯಂತಿ, ಫೆ.5ರಂದು ಸವಿತ ಮಹರ್ಷಿಗಳ ಜಯಂತಿ ಹಾಗೂ ಫೆ.10ರಂದು ಕಾಯಕ ಶರಣರ ಜಯಂತಿಗಳನ್ನು ಆಯಾ ದಿನವೇ ಆಚರಣೆ ಮಾಡೋಣ ಎಂದರು. ಆಗ ಸಭೆ ಸಹಮತದ ಒಪ್ಪಿಗೆ ಸೂಚಿಸಿತು.ಈ ಸಭೆಗೆ ಬಾರದೇ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕಾಗಿದೆ. ಈ ನೋಟಿಸ್ ಪ್ರತಿಯನ್ನು ಜಿಲ್ಲಾಧಿಕಾರಿ ಮತ್ತು ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳಿಗೂ ಕಳಿಸಿಕೊಡಬೇಕೆಂದು ಕಚೇರಿ ಸಿಬ್ಬಂದಿಗೆ ತಹಸೀಲ್ದಾರರು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಮಲ್ಲಿಕಾರ್ಜುನ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ಮಡಿವಾಳ ಸಮಾಜದ ಗೌರವ ಅಧ್ಯಕ್ಷ ದತ್ತಪ್ಪ, ಸವಿತ ಸಮಾಜದ ಮುಖಂಡರಾದ ವೆಂಕಟೇಶ್, ಸುಬ್ರಮಣ್ಯ ಮೊದಲಾದವರು ಹಾಜರಿದ್ದರು.- - - -28ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಫೆಬ್ರವರಿಯಲ್ಲಿ ಬರುವ ಮಡಿವಾಳ ಮಾಚಿದೇವರ, ಸವಿತ ಮಹರ್ಷಿ ಹಾಗೂ ಕಾಯಕ ಶರಣರ ಜಯಂತಿಗಳನ್ನು ಆಚರಿಸಲು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅಧ್ಯಕ್ಷತೆಯಲ್ಲಿ ಸಿದ್ಧತಾ ಸಭೆ ನಡೆಯಿತು.