ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ

| Published : Feb 09 2025, 01:15 AM IST

ಸಾರಾಂಶ

ರಾಜ್ಯ ಬಜೆಟ್ ಅಧಿವೇಶನ ಮಾ.3ರಿಂದ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಹಾವೇರಿ:ರಾಜ್ಯ ಬಜೆಟ್ ಅಧಿವೇಶನ ಮಾ.3ರಿಂದ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 3ರಂದು ಗ್ರಾಪಂ, ಮಾ.4ರಂದು ಬಿಸಿಯೂಟ ನೌಕರರು, ಹೀಗೆ ಪ್ರತಿದಿನ ಒಂದು ವಿಭಾಗದ ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವರು. ಕೇಂದ್ರ ಬಜೆಟ್ ಮತ್ತೊಮ್ಮೆ ದುಡಿಯುವ ವರ್ಗಕ್ಕೆ ದ್ರೋಹ ಬಗೆದಿದೆ. ಶ್ರೀಮಂತರ ಪಕ್ಷಪಾತಿಯಾಗಿದೆ. ಸಾರ್ವಜನಿಕ ಕ್ಷೇತ್ರಗಳಾದ ವಿದ್ಯುತ್, ತೈಲ, ಸಾರಿಗೆ ಮತ್ತು ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಇತರ ಖನಿಜಗಳು ಸೇರಿದಂತೆ ಮೂಲಸೌಕರ್ಯಗಳು, ಖನಿಜಗಳು, ಸಾರ್ವಜನಿಕ ಸೇವಾ ಜಾಲವನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಸ್ಪಷ್ಟ ನೀಲ ನಕ್ಷೆಯನ್ನು ಸಿದ್ಧಪಡಿಸಿದೆ. ಅಸಂಘಟಿತ ಕಾರ್ಮಿಕ ವರ್ಗದ ಜೀವನೋಪಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂದರು.ಕೇಂದ್ರದ ಆರ್ಥಿಕ ನೀತಿಗಳನ್ನೇ ರಾಜ್ಯ ಸರ್ಕಾರ ಬಹುತೇಕ ಅನುಸರಿಸುತ್ತಿದೆ. ಬಿಜೆಪಿ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಜೋರು ಧ್ವನಿಯಲ್ಲಿ ಮಾತಾಡುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ವಿಫಲರಾಗಿದ್ದಾರೆ. ಈ ಎರಡೂ ಪಕ್ಷಗಳು ಬೇರೆ ಬೇರೆಯಾದರೂ ನೀತಿಗಳೆಲ್ಲ ಒಂದೇ. ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳ ಜಾರಿಗೆ ಅಗತ್ಯವಿರುವ ಅನುದಾನವನ್ನು ನೀಡಲಿಲ್ಲ. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮವಹಿಸಲಿಲ್ಲ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಮಪರ್ಕವಾಗಿ ಜಾರಿಗೊಳಿಸುತ್ತಿಲ್ಲ. ಈ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಅವುಗಳನ್ನು ಈಡೇರಿಸಲು ಸರ್ಕಾರಗಳು ಮುಂದಾಗದಿರುವುದು ನೋವಿನ ಸಂಗತಿ ಎಂದರು. ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯನ್ನು ಬಲಪಡಿಸಿ ಅಭಿವೃದ್ಧಿಪಡಿಸಬೇಕು. ಬಿಸಿಯೂಟ ಯೋಜನೆಯ ಯಾವುದೇ ಸ್ವರೂಪದ ಖಾಸಗೀಕರಣ ಕೈಬಿಡಬೇಕು. ಕಟ್ಟಡ ಕಾಮಿಕರಿಗೆ ಘೋಷಿಸಿರುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಕಲ್ಯಾಣ ಮಂಡಳಿ ನಿಧಿ ದುರುಪಯೋಗ ನಿಲ್ಲಬೇಕು. ಎನ್.ಪಿ.ಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸಬೇಕು. ಕಾರ್ಯನಿರತ ಪತ್ರಕರ್ತರ ಕಾಯಿದೆಗೆ ತಿದ್ದುಪಡಿ ತರಬೇಕು. ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ವೇತನ ಪರಿಷ್ಕರಿಸಲು ಅನುಕೂಲವಾಗುವಂತೆ ಹೊಸ ವೇತನ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿದ್ದಾರೆ.ಜಿಲ್ಲಾ ಸಂಚಾಲಕ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರು, ಜಿಲ್ಲಾ ಮುಖಂಡರಾದ ರಾಜೇಶ್ವರಿ ಹಿರೇಮಠ, ಸಿದ್ದಮ್ಮ ಚೌಟಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಇದ್ದರು.