ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ವತಿಯಿಂದ ರಮಾಬಾಯಿ ಅಂಬೇಡ್ಕರ್‌ರವರ 127ನೇ ಜನ್ಮದಿನೋತ್ಸವವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.ಎನ್.ಕೆ.ನಿಧಿಕುಮಾರ್ ಮಾತನಾಡಿ, ರಮಾಬಾಯಿ ಅಂಬೇಡ್ಕರ್‌ರವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಧರ್ಮಪತ್ನಿಯಾಗಿದ್ದು ಅವರ ಪರಿಶ್ರಮದಿಂದಲೇ ಬಾಬಾ ಸಾಹೇಬರು ಅಜರಾಮರರಾಗಿ ಬೆಳೆದಿದ್ದು ಎಂದರೆ ತಪ್ಪಾಗಲಾರದು ಎಂದರು.
ಬಾಬಾ ಸಾಹೇಬರ ಪ್ರತಿಯೊಂದು ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ಸದಾ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರಲ್ಲದೇ, ಅವರೂ ಸಹ ನೂರಾರು ಜನ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಅನ್ನ- ಆಹಾರ ನೀಡಿ ಪೋಷಿಸಿದಂತಹ ಮಹಾತಾಯಿ, ಇಂದು ನಾವು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ರಚಿಸಿದಂಥ ಭಾರತ ಸಂವಿಧಾನಕ್ಕೆ ಎಷ್ಟು ಗೌರವ ನೀಡುತ್ತಿದ್ದೇವೋ ಅದೇ ರೀತಿಯಲ್ಲಿ ಅದರ ರಚನೆಗೆ ತೆರೆ ಹಿಂದೆ ಸಹಕರಿಸಿದ ಮಹಾತಾಯಿ ರಮಾಬಾಯಿ ಅಂಬೇಡ್ಕರ್‌ರವರು ಸಹ ಪ್ರಾತಃಸ್ಮರಣಿಯರು ಎಂದರು.ಅವರ 127ನೇ ಜನ್ಮದಿನೋತ್ಸವವನ್ನು ನಮ್ಮ ಜಿಲ್ಲಾ ಕಚೇರಿಯಲ್ಲಿ ಅತ್ಯಂತ ಸರಳವಾಗಿ ಆಚರಿಸಿ, ನೆರೆದಿರುವ ಜನರಿಗೆ ಸಿಹಿ ವಿತರಿಸಿ ಅವರ ಕುರಿತು ಎರಡು ಮಾತುಗಳನ್ನು ಆಡುವ ಸೌಭಾಗ್ಯ ನಮಗೆ ಲಭಿಸಿದೆ. ಅಂಬೇಡ್ಕರ್‌ರವರ ಪ್ರತಿಯೊಂದು ಕಾರ್ಯದಲ್ಲಿಯೂ ಜೊತೆಯಾಗಿ ಮುನ್ನಡೆಸಿದ ಕೀರ್ತಿ ಆ ಮಹಾತಾಯಿಗೆ ಸಲ್ಲುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ಮಹಾನ್ ಮಾತೆಯ ಜನ್ಮದಿನಾಚರಣೆಯನ್ನು ಕೇಂದ್ರ ಮತ್ತು ದೇಶದ ಎಲ್ಲಾ ರಾಜ್ಯಗಳಲ್ಲಿ ವಿಶೇಷವಾಗಿ ಆಚರಣೆ ಮಾಡಬೇಕೆಂದು ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಸಹ ತಿಳಿಸಿದರು.ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಮಾತನಾಡಿ, ರಮಾಬಾಯಿ ಅಂಬೇಡ್ಕರ್‌ರವರು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು, ಅವರ ತಂದೆ ಪ್ರತಿನಿತ್ಯ ಮೀನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು, ಆದರೆ ಅಂಬೇಡ್ಕರ್‌ರವರನ್ನು ಇವರು ವಿವಾಹವಾದ ಸನ್ನಿವೇಶವೇ ರೋಚಕವಾದದ್ದು, ಏಕೆಂದರೆ ಅವರು ಅತ್ಯಂತ ಸರಳವಾಗಿ ತರಕಾರಿ ಮಾರುಕಟ್ಟೆಯಲ್ಲಿ ಬಾಬಾ ಸಾಹೇಬರನ್ನು ವರಿಸಿದರು, ಅಂದಿನಿಂದ ಬಾಬಾ ಸಾಹೇಬರ ಪ್ರತಿಯೊಂದು ಕಾರ್ಯದಲ್ಲಿಯೂ ಮಾತೆಯವರ ಸಹಕಾರ ಅಪಾರವಾದದ್ದು, ಅವರ ಸಹಕಾರದಿಂದಲೇ ಬಾಬಾ ಸಾಹೇಬರು ನಮ್ಮ ಭವ್ಯ ಭಾರತದ ಏಕತೆಗೆ ಸಂವಿಧಾನ ರಚನೆಗೆ ಕಾರಣವಾಗಿದ್ದು ಎಂತಲೂ ಹೇಳಬಹುದು, ಅಂತಹ ಮಹಾನ್‌ಮಾತೆಯ ಜನ್ಮದಿನಾಚರಣೆಯನ್ನು ಇಂದು ನಾವು ಆಚರಿಸುತ್ತಿರುವುದಕ್ಕೇ ಧನ್ಯರು ಎಂದು ಭಾವುಕರಾಗಿ ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್ ಬಿ.ಆರ್., ಜಿಲ್ಲಾ ಗೌರವಾಧ್ಯಕ್ಷ ಗುಳೂರು ರಾಜಣ್ಣ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ವಸಂತ್ ಕುಮಾರ್.ಎಚ್.ಎಲ್., ಅಟ್ರಾಸಿಟಿ ಕಮಿಟಿಯ ಜಿಲ್ಲಾ ಸದಸ್ಯ ಎ.ರಂಜನ್, ತಾಲೂಕು ಗೌರವಾಧ್ಯಕ್ಷ ಗಂಗಾಧರ್ ಜಿ.ಆರ್., ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಗೌಡಿಹಳ್ಳಿ, ಕಿರಣ್ ಕುಮಾರ್ ವೈ.ಎಸ್., ಭಾಷಾ, ಸೈಯದ್ ಅಜೀಜ್, ಕೆಸ್ತೂರು ನರಸಿಂಹಮೂರ್ತಿ ಸೇರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.