ಮೈಸೂರಿನಲ್ಲಿ ಮತ್ತೊಂದು ಪ್ರತಿಮಾಯಣ...!

| Published : Feb 09 2025, 01:15 AM IST

ಸಾರಾಂಶ

ಕೆಂಪೇಗೌಡ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆಗೆ ಒಕ್ಕಲಿಗರ ಸಂಘವು ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಟಿ. ನರಸೀಪುರ ರಸ್ತೆ, ಲಲಿತಮಹಲ್ ಮೈದಾನ ಪಕ್ಕದಲ್ಲಿರುವ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಿಂದ ಸ್ಥಳದಲ್ಲಿ ಶನಿವಾರ ಬೆಳಗ್ಗೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಕೆಂಪೇಗೌಡ ವೃತ್ತದಲ್ಲಿ ಅಭಿಮಾನಿಗಳು ಶನಿವಾರ ಬೆಳಗಿನ ಜಾವ ಕೆಂಪೇಗೌಡರ ಕಂಚಿನ ಪ್ರತಿಮೆ ಇರಿಸಿದ್ದಾರೆ. ಶನಿವಾರ ಬೆಳಗ್ಗೆ ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅನುಮತಿ ಇಲ್ಲದೆ ಪ್ರತಿಮೆ ಇರಿಸಿರುವುದನ್ನು ತೆರವಿಗೆ ಮುಂದಾದರು.ಆದರೆ, ಈ ವೇಳೆ ಸ್ಥಳದಲ್ಲಿದ್ದ ಕೆಂಪೇಗೌಡರ ಅಭಿಮಾನಿಗಳು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಪೊಲೀಸರು ಮತ್ತು ಅಭಿಮಾನಿಗಳ ನಡುವೆ ವಾಗ್ವಾದ ನಡೆದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.ನಗರ ಪಾಲಿಕೆಯಿಂದ ಅನುಮತಿ ಪಡೆಯದೇ ಏಕಾಏಕಿ ಪ್ರತಿಮೆ ಇರಿಸಿರುವುದು ಸರಿಯಲ್ಲ ಎಂದು ಪೊಲೀಸರು ಹೇಳಿದರು. ಮೂರು ತಿಂಗಳ ಹಿಂದೆಯೇ ಇಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡುವುದಿಲ್ಲ ಎಂದು ಕೆಂಪೇಗೌಡರ ಅಭಿಮಾನಿಗಳು ಪಟ್ಟುಹಿಡಿದರು.ಕೆಂಪೇಗೌಡ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆಗೆ ಒಕ್ಕಲಿಗರ ಸಂಘವು ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದೆ. ಈ ವಿಚಾರವಾಗಿ ಹಲವು ಬಾರಿ ಗಲಾಟೆ ಸಹ ನಡೆದಿತ್ತು. ಶಾಸಕ ಕೆ. ಹರೀಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ನಗರ ಪಾಲಿಕೆ ಅನುಮತಿ ಪಡೆದು ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದ್ದರು.ಈ ನಡುವೆ ಶನಿವಾರ ಬೆಳಗಿನ ಜಾವ ಪ್ರತಿಮೆ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.