ಸಾರಾಂಶ
ಭ್ರಷ್ಟಾಚಾರ ಪ್ರಕರಣದ ಜತೆಗೆ ರಾಜ್ಯಪಾಲರ ನಿಂದನೆಗಾಗಿ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಬೇಕು ಎಂದು ಶಾಸಕರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮೈಸೂರು ಮುಡಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಪಾರದರ್ಶಕ ತನಿಖೆಗೆ ಅನುವಾಗುವಂತೆ ಕೂಡಲೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಸ್ಸಿಗೆ ಕಲ್ಲು ತೂರಿ ಸಾರ್ವಜನಿಕರಲ್ಲಿ ಭಯಭೀತ ವಾತಾವರಣ ಸೃಷ್ಟಿಸುವ ಮೂಲಕ ಬೆಂಬಲ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಮಂಗಳೂರಿನಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.ಬಸ್ಸಿಗೆ ಕಲ್ಲು ತೂರಾಡಿದ ವೇಳೆ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಪೊಲೀಸರು ಆರೋಪಿಗಳಿಗೆ ಠಾಣೆಯಲ್ಲಿ ಜಾಮೀನು ನೀಡಿ ಗೌರವಯುತವಾಗಿ ಬಿಟ್ಟು ಕಳುಹಿಸುವ ಮಟ್ಟಿಗೆ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಕಾಮತ್ ಟೀಕಿಸಿದರು.
ಐವನ್ ವಿರುದ್ಧ ಕ್ರಮಕ್ಕೆ ಆಗ್ರಹ: ಬಾಂಗ್ಲಾದಲ್ಲಿ ನಡೆದ ದಂಗೆಯಂತೆ ಇಲ್ಲೂ ನಡೆಸಿ ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ಎಂಎಲ್ಸಿ ಐವನ್ ಡಿಸೋಜರಂತಹ ದಲಿತ ವಿರೋಧಿ ಕಾಂಗ್ರೆಸಿಗರ ಮೇಲೆ ಸ್ವಯಂ ಪ್ರೇರಿತವಾಗಿ ಸುಮೋಟೊ ಕೇಸ್ ದಾಖಲಿಸಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಮೇಲೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಗೀಚಿದ್ದಕ್ಕೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದರು. ಈಗ ಏಕೆ ಆಗಲ್ಲ? ಚುನಾವಣೆಗೆ ನಿಂತು ಗೆಲ್ಲಲಾಗದಂತಹ ವ್ಯಕ್ತಿಗಳು ರಾಜ್ಯಪಾಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಅಕ್ಷಮ್ಯ. ಕೂಡಲೆ ಭ್ರಷ್ಟಾಚಾರ ಪ್ರಕರಣದ ಜತೆಗೆ ರಾಜ್ಯಪಾಲರ ನಿಂದನೆಗಾಗಿ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಬೇಕು ಎಂದು ಶಾಸಕರು ಆಗ್ರಹಿಸಿದರು.ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಸಂಜಯ್ ಪ್ರಭು, ಪೂರ್ಣಿಮಾ, ದಿವಾಕಕರ್ ಪಾಂಡೇಶ್ವರ್, ರಮೇಶ್ ಹೆಗ್ಡೆ, ಅಶ್ವಿತ್ ಕೊಟ್ಟಾರಿ ಮತ್ತಿತರರಿದ್ದರು.