ಗ್ರಾಮದಲ್ಲಿರುವ ಗೋಮಾಳಗಳು ಸಮೀಪದ ಹಾಲು ಉತ್ಪಾದಕ ಸಹಕಾರ ಸಂಘದ ಸುಪರ್ದಿಗೆ ಸಿಗುವಂತಾದರೆ ಹೈನುಗಾರಿಕೆಯನ್ನು ಇನ್ನಷ್ಟು ಸಮೃದ್ಧಗೊಳಿಸಿಕೊಳ್ಳಬಹುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗ್ರಾಮದಲ್ಲಿರುವ ಗೋಮಾಳಗಳು ಸಮೀಪದ ಹಾಲು ಉತ್ಪಾದಕ ಸಹಕಾರ ಸಂಘದ ಸುಪರ್ದಿಗೆ ಸಿಗುವಂತಾದರೆ ಹೈನುಗಾರಿಕೆಯನ್ನು ಇನ್ನಷ್ಟು ಸಮೃದ್ಧಗೊಳಿಸಿಕೊಳ್ಳಬಹುದು. ಇದಕ್ಕೆ ಕೆಎಂಎಫ್ ಪ್ರಯತ್ನಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಸೋಮವಾರ ಕೊಕ್ರಾಡಿ ಸನಿಹದ ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೀರ ಸಮೃದ್ಧಿ ಕಟ್ಟಡದ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕೆಎಂಎಫ್ ಹಾಗೂ ಜಿಲ್ಲಾಧಿಕಾರಿಯವರ ಜತೆ ಸಭೆ ನಡೆಸಿ ಗೋಮಾಳಗಳ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಗೋಮಾಳಗಳ ಉಪಯೋಗದಿಂದ ಬಡ ಹೈನುಗಾರರಿಗೂ ಉಪಯೋಗವಾಗಲಿದೆ. ಅದೇ ರೀತಿ ಕರುಗಳ ಬ್ಯಾಂಕ್ ನ್ನು ಸ್ಥಾಪಿಸುವ ಚಿಂತನೆಯನ್ನು ಅತೀ ಶೀಘ್ರ ನಡೆಸಿದರೆ ಹೈನುಗಾರಿಕೆಗೆ ಬಲ ಬರಲಿದೆ ಎಂದರು.

ಕಟ್ಟಡ ಉದ್ಘಾಟಿಸಿದ ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು, ಗೋಮಾಳಗಳನ್ನು‌ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಬಗ್ಗೆ ವರ್ಷಗಳ ಹಿಂದೆಯೇ ಸರಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಳಿಗೂ ಮಾಹಿತಿ ನೀಡಲಾಗಿದೆ. ಕೇಂದ್ರ ಸರಕಾರದ ಗೋಕುಲ ಮಿಷನ್ ಯೋಜನೆಯಡಿ ಕರುಗಳ ಪಾಲನೆ, ಪೋಷಣೆ ಮಾಡುವ ಅವಕಾಶ ಇದೆ. ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವುದು ಬೆಳ್ತಂಗಡಿ ತಾಲೂಕಿನವರು ಎಂದ ಅವರು, ಸಂಘಕ್ಕೆ ಒಕ್ಕೂಟದ ವತಿಯಿಂದ 3 ಲಕ್ಷ ರು. ಚೆಕ್‌ನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಪಶು ಆಹಾರ ಗೋದಾಮು ಉದ್ಘಾಟಿಸಿದರು. ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ನಾಮಫಲಕ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮೋಹನ ಅಂಡಿಂಜೆ ಅಧ್ಯಕ್ಷತೆ ವಹಿಸಿದ್ದರು.

ಒಕ್ಕೂಟ ನಿರ್ದೇಶಕರಾದ ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವಿವೇಕ್ ಡಿ., ಸುಧಾಕರ ಶೆಟ್ಟಿ, ಮಾಜಿ ನಿರ್ದೇಶಕ ಪದ್ಮನಾಭ ಅರ್ಕಜೆ, ವ್ಯವಸ್ಥಾಪಕ ಡಾ. ರವಿರಾಜ ಉಡುಪ, ಉಪ ವ್ಯವಸ್ಥಾಪಕ ಡಾ. ಡಿ.ಆರ್. ಸತೀಶ್ ರಾವ್, ಧರ್ಮಸ್ಥಳ ಸಮುದಾಯ ಅಭಿವೃದ್ಧಿಯ ಮಹಾಬಲ ಕುಲಾಲ್, ಅಂಡಿಂಜೆ ಗ್ರಾಪಂ ಅಧ್ಯಕ್ಷ ನಿತೀನ್ ಎಂ., ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್. ಸುಧಾಕರ ಭಂಡಾರಿ, ಸಂಘದ ಉಪಾಧ್ಯಕ್ಷ ರತ್ನಕುಮಾರ್ ಹೆಗ್ಡೆ, ನಿರ್ದೇಶಕರಾದ ಪ್ರಶಾಂತ, ಚೈತನ್ಯಾ, ಪ್ರದೀಪ ಶೆಟ್ಟಿ, ಶಶಿಧರ, ಸೂರ್ಯನಾರಾಯಣ ಡಿ.ಕೆ., ಪ್ರಶಾಂತ ಆಚಾರ್ಯ, ಯಶೋಧರ, ಸುಚಿತ್ರಾ, ಪದ್ಮಶ್ರೀ, ವಿಮಲ, ಹಾಲು ಪರೀಕ್ಷಕ ಸುಧಾಕರ ಪೂಜಾರಿ, ಸಹಾಯಕ ರಾಜೇಶ್ ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮನಿಸಲಾಯಿತು. ರಾಜ್ಯ ಹೆದ್ದಾರಿ ಹಾಗೂ ಸಂಘದ ಕಟ್ಟಡವನ್ನು ಸಂಪರ್ಕಿಸುವ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ಮೋಹನ ಅಂಡಿಂಜೆ ಸ್ವಾಗತಿಸಿದರು.

ಮುಖ್ಯಕಾರ್‍ಯನಿರ್ವಹಣಾಧಿಕಾರಿ ಪವಿತ್ರ ಬಿ. ವರದಿ ಮಂಡಿಸಿದರು. ಸೌಮ್ಯ ನಿರ್ವಹಿಸಿದರು‌.