ಮಡಿಕೇರಿ: ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮತ್ತು ಬಿಸಿಯೂಟ ನೌಕರರ ಸಂಘ ಶುಕ್ರವಾರ ‘ಕರಾಳ ದಿನ’ವನ್ನಾಗಿ ಘೋಷಿಸಿಕೊಂಡು ಜಿಲ್ಲಾಡಳಿತ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್ ಅವರ ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ ಮತ್ತು ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಎಸ್. ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರ ಈ ಹಿಂದೆ ಚುನಾವಣೆ ಸಂದರ್ಭ ನೀಡಿದ್ದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಮತ್ತು ಕಾರ್ಯಕರ್ತೆಯರಿಗೆ 10 ಸಾವಿರ ರು. ಕನಿಷ್ಠ ಗೌರವ ಧನವನ್ನು ಜಾರಿ ಮಾಡಬೇಕು, ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ ಮತ್ತು ಯುಕೆಜಿ ವಿಸ್ತರಣೆ ಆಗಬೇಕು ಮತ್ತು ರಾಜ್ಯದ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ -ಯುಕೆಜಿ ಆರಂಭಕ್ಕೆ ಅನುದಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.
ಬಿಸಿಯೂಟ ನೌಕರರ ಬೇಡಿಕೆ: ‘ಅಕ್ಷರ ದಾಸೋಹ’ ಯೋಜನೆಯನ್ನು ಪ್ರಾರಂಭಿಸಿ 25 ವರ್ಷಗಳಾಗಿದೆ. ಬೆಲೆ ಏರಿಕೆ ಆಧಾರದಲ್ಲಿ ಯೋಜನೆಗೆ ಬೇಕಾದ ಅನುದಾನಗಳನ್ನು ಹೆಚ್ಚಳ ಮಾಡದೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಮೂಲಕ ಯೋಜನೆಯನ್ನು ಬಲಹೀನಗೊಳಿಸಲಾಗುತ್ತಿದೆ. ಇಸ್ಕಾನ್ ಗೆ ಬಿಸಿಯೂಟ ಕಾರ್ಯಕ್ರಮ ನೀಡುವ ಪ್ರಸ್ತಾಪವನ್ನು ಕೈಬಿಡಬೇಕು ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗಿದೆ.ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ವಿ.ಎಸ್. ಸುಮಿತ್ರಾ, ಮಡಿಕೇರಿ ತಾಲೂಕು ಅಧ್ಯಕ್ಷೆ ಡಿ.ಎಸ್. ಸರೋಜ, ಕಾರ್ಯದರ್ಶಿ ಇಂದಿರಾ ಎಚ್.ಟಿ., ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕುಸುಮ ಎಚ್.ಸಿ., ಪದಾಧಿಕಾರಿಗಳಾದ ಲಲಿತಾ ಸಿ.ಕೆ., ಇಂದಿರಾ, ಲತಾ ಎ.ಕೆ. ಇದ್ದರು.