ಸಾರಾಂಶ
--ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಕೊಲ್ಲಿ ರಾಷ್ಟ್ರಗಳು ಸೇರಿ ವಿದೇಶಕ್ಕೆ ಸಾಗಿಸುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪದ ಮೇರೆಗೆ ಯಾದಗಿರಿ ಜಿಲ್ಲೆಯ ಅಕ್ಕಿ ಮಿಲ್‌ಗಳಲ್ಲಿ ಇತ್ತೀಚೆಗೆ ವಶಕ್ಕೆ ಪಡೆದಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ಅಕ್ಕಿ ಬಡವರ ಪಾಲಿನ ‘ಅನ್ನಭಾಗ್ಯ’ದ ಅಕ್ಕಿ ಎಂಬುದು ಇದೀಗ ದೃಢಪಟ್ಟಿದೆ. ಈ ಕುರಿತು ಆಹಾರ ಪರೀಕ್ಷಾ ತಜ್ಞರು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರದಿ ಸಲ್ಲಿಸಿದ್ದಾರೆ.
ಈ ಮೂಲಕ ಬಡವರ ಹೊಟ್ಟೆ ತುಂಬಿಸಬೇಕಿದ್ದ ಅಕ್ಕಿಯನ್ನು ಪರದೇಶಕ್ಕೆ ಕಾನೂನುಬಾಹಿರವಾಗಿ ಸಾಗಿಸುತ್ತಿದ್ದ ಖದೀಮರ ವಿರುದ್ಧದ ತನಿಖೆಗೆ ಸಿಐಡಿ ಅಧಿಕಾರಿಗಳಿಗೆ ಮಹತ್ವದ ಪುರಾವೆ ಸಿಕ್ಕಂತಾಗಿದೆ.
ಪಡಿತರ ಅಕ್ಕಿ ಅಕ್ರಮ ಸಂಗ್ರಹ ಶಂಕೆ ಮೇರೆಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎರಡು ಅಕ್ಕಿ ಮಿಲ್‌ಗಳಲ್ಲಿ ಸೆ.5ರಂದು ವಶಪಡಿಸಿಕೊಳ್ಳಲಾದ ಅಕ್ಕಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತ್ಯೋದಯ, ಅನ್ನಭಾಗ್ಯ ಸೇರಿ ವಿವಿಧ ಯೋಜನೆಯಡಿ ವಿತರಿಸುವ ಪಡಿತರ ಅಕ್ಕಿ ನಡುವೆ ಸಾಮ್ಯತೆ ಇತ್ತು. ಈ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಉದ್ದೇಶ ಬಹಿರಂಗವಾಗಿತ್ತು. ಹೀಗಾಗಿ ಅಕ್ಕಿಯನ್ನು ಪರೀಕ್ಷೆಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ಅಕ್ಕಿ ಪರೀಕ್ಷಿಸಿದ ಆಹಾರ ಪರೀಕ್ಷಾ ತಜ್ಞರು, ಮಿಲ್‌ನಲ್ಲಿ ಜಪ್ತಿಯಾದ ಅಕ್ಕಿ ಹಾಗೂ ಪಡಿತರ ಅಕ್ಕಿ ಮಧ್ಯೆ ಸಾಮ್ಯತೆ ಇದೆ. ಮಿಲ್‌ನಲ್ಲಿ ಸಂಗ್ರಹಿಸಿದ್ದ ಅಕ್ಕಿ ಪಡಿತರ ಅಕ್ಕಿಯೇ ಆಗಿದೆ ಎಂದು ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ತನಿಖೆ ಮುಂದುವರೆದಿದೆ ಎಂದು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಹೆಚ್ಚಿನ ಪೌಷ್ಟಿಕಾಂಶವುಳ್ಳ ಅಕ್ಕಿ:
ಸಾಮಾನ್ಯವಾಗಿ ಯಾವುದೇ ಸಾರವರ್ಧಿತ ಅಕ್ಕಿಯಲ್ಲಿ ಅವಶ್ಯಕ ವಿಟಮಿನ್ ಹಾಗೂ ಮಿನರಲ್ ಸೇರಿ ಇತರೆ ಪೌಷ್ಟಿಕಾಂಶಗಳಿರುತ್ತವೆ. ಆದರೆ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಗಿಂತ ವಿಟಮಿನ್-9, ವಿಟಮಿನ್-ಬಿ12 ಹಾಗೂ ಕಬ್ಬಿಣಾಂಶ ಸೇರಿ ಹೆಚ್ಚಿನ ಪೌಷ್ಟಿಕಾಂಶಗಳಿರುತ್ತವೆ. ರೈತರಿಂದ ಸಂಗ್ರಹಿಸುವ ಸಾರವರ್ಧಿತ ಅಕ್ಕಿಗೆ ಹೆಚ್ಚಿನ ಪೋಷಕಾಂಶಗಳನ್ನು ಸೇರಿಸಿದ ನಂತರ ಜನರಿಗೆ ಪಡಿತರ ಅಕ್ಕಿಯಾಗಿ ವಿತರಿಸಲಾಗುತ್ತದೆ. ಯಾದಗಿರಿ ಜಿಲ್ಲೆಯ ಅಕ್ಕಿ ಮಿಲ್‌ನಲ್ಲಿ ಪತ್ತೆಯಾದ ಪಡಿತರ ಅಕ್ಕಿ ಪರಿಶೀಲಿಸಿದಾಗ ಇದು ಪಡಿತರ ಅಕ್ಕಿ ಎಂಬುದು ರುಜುವಾತಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೌಷ್ಟಿಕಾಂಶ ಕೊರತೆ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ, ಕಲಬುರಗಿ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ವಿತರಿಸುವ ಪಡಿತರ ಅಕ್ಕಿಯಲ್ಲಿ ಕಬ್ಬಿಣಾಂಶ ಹೆಚ್ಚು ಮಿಶ್ರಣ ಮಾಡಲಾಗುತ್ತದೆ ಎಂದೂ ಮೂಲಗಳು ಹೇಳಿವೆ.
ಕೋಟ್ಯಂತರ ಮೌಲ್ಯದ ಅಕ್ಕಿ ವಶ:
ಗುರುಮಠಕಲ್ ತಾಲೂಕಿನ ನಾರಾಯಣಪುರ ಗ್ರಾಮದ ವ್ಯಾಪ್ತಿಯ ಚಂದ್ರಕಿ ರಸ್ತೆ ಪಕ್ಕದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಹಾಗೂ ಶ್ರೀ ಬಾಲಾಜಿ ರೈಸ್ ಇಂಡಸ್ಟ್ರಿಗಳ ಗೋದಾಮುಗಳ ಮೇಲೆ ಯಾದಗಿರಿ ಜಿಲ್ಲಾಡಳಿತ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಕೋಟ್ಯಂತರ ರು. ಮೌಲ್ಯದ 600 ಟನ್‌ಗೂ ಹೆಚ್ಚಿನ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಇದು ಪಡಿತರ ಅಕ್ಕಿಯೇ ಎಂಬುದನ್ನು ಖಡಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ಪ್ರಯೋಗಾಲಯಕ್ಕೆ ಸಿಐಡಿ ಅಧಿಕಾರಿಗಳು ಕಳುಹಿಸಿದ್ದರು. ಇದೀಗ ಈ ಅಕ್ಕಿ ಪಡಿತರ ಅಕ್ಕಿ ಎಂಬುದು ದೃಢಪಟ್ಟಿದೆ. ಈ ಅಕ್ಕಿಯನ್ನು ದುಬೈ, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಸಂಗ್ರಹಿಡಲಾಗಿತ್ತು. ಬಿಪಿಎಲ್ ಕಾರ್ಡ್‌ದಾರರಿಗೆ ನೀಡುವ ಅಕ್ಕಿಯನ್ನು ಸಂಗ್ರಹಿಸಿ ಅಕ್ಕಿಮಿಲ್‌ಗಳಿಗೆ ಸಾಗಿಸಿ ಅಲ್ಲಿ ಪಾಲಿಶ್ ಮಾಡಲಾಗುತ್ತದೆ. ನಂತರ ಆ ಅಕ್ಕಿಯನ್ನು ಪ್ಯಾಕ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.