ಸಾರಾಂಶ
ಮದ್ದೂರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಒಟ್ಟು 36 ಅರ್ಜಿಗಳನ್ನು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಸ್ವೀಕರಿಸಿದರು. ಸ್ವೀಕರಿಸಿದ ಅರ್ಜಿಗಳ ಪೈಕಿ 11 ಅರ್ಜಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಲೋಕಾಯುಕ್ತರಿಗೆ ಶಿಫಾರಸ್ಸು ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಕಚೇರಿಯ ವ್ಯಾಪಕ ಭ್ರಷ್ಟಾಚಾರ, ಗ್ರಾಪಂ ಪಿಡಿಒಗಳಿಂದ ಸಾರ್ವಜನಿಕರ ಬಗ್ಗೆ ನಿರ್ಲಕ್ಷ ಧೋರಣೆ ಮತ್ತು ದುರ್ನಡತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳಿಗೆ ಅಹವಾಲು ಸಲ್ಲಿಕೆಯಾದವು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಒಟ್ಟು 36 ಅರ್ಜಿಗಳನ್ನು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಸ್ವೀಕರಿಸಿದರು. ಸ್ವೀಕರಿಸಿದ ಅರ್ಜಿಗಳ ಪೈಕಿ 11 ಅರ್ಜಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಲೋಕಾಯುಕ್ತರಿಗೆ ಶಿಫಾರಸ್ಸು ಮಾಡಲಾಯಿತು.
ತಾಲೂಕಿನ ನಿಡಘಟ್ಟ, ಹೆಮ್ಮನಹಳ್ಳಿ, ಸೋಮನಹಳ್ಳಿ, ಎಸ್.ಐ.ಹೊನ್ನಲಗೆರೆ ಸೇರಿದಂತೆ 7 ಪಿಡಿಒಗಳ ವಿರುದ್ಧ ಇ-ಖಾತೆ ಮತ್ತು ದಾಖಲೆ ನೀಡದೆ ವಿಳಂಬ ಮಾಡುತ್ತಿರುವ ಬಗ್ಗೆ ತಾಪಂ ಇಒ ರಾಮಲಿಂಗಯ್ಯ ಎದುರು ಸಾರ್ವಜನಿಕರು ಲೋಕಾಯುಕ್ತರಲ್ಲಿ ದೂರು ನೀಡಿದರು. ಕಂದಾಯ ಇಲಾಖೆ ಭೂ-ದಾಖಲೆ ವಿಭಾಗದ ಪ್ರಥಮ ದರ್ಜೆ ಸಹಾಯಕ ಸುನೀಲ್ ಭೂಮಿದಾಖಲೆ ನೀಡಲು ಈಗಾಗಲೇ 2 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಹಣ ನೀಡಿದ ಕಾರಣ ಬೇರೆಯವರ ದಾಖಲೆಗಳನ್ನು ನೀಡಿ ಕಣ್ಣು ಕಾಣದ ನನಗೆ ಪದೇ ಪದೇ ಕಚೇರಿಗೆ ಅಲೆಸುತ್ತಿದ್ದಾರೆ. ನಿಮ್ಮಿಂದ ನನಗೆ ನ್ಯಾಯ ದೊರಕಿಸಿಕೊಡಿ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಕುಣ್ಣೀರು ಸುರಿಸುತ್ತಾ ಲೋಕಾಯುಕ್ತ ಅಧಿಕಾರಿಗಳಲ್ಲಿ ಅಂಗಲಾಚಿ ಬೇಡಿಕೊಂಡರು.
ಇದರಿಂದ ಕೋಪಗೊಂಡ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಪ್ರಥಮ ದರ್ಜೆ ಸಹಾಯಕ ಸುನಿಲ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಸರ್ಕಾರಿ ಅಧಿಕಾರಿಗಳು ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಇನ್ನು ಮುಂದೆ ಇಂತಹ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್, ಇನ್ಸ್ ಪೆಕ್ಟರ್ ಬ್ಯಾಟರಾಯ ಗೌಡ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಕುಮಾರ್, ಲೇಪಾಕ್ಷಿ ಮೂರ್ತಿ ಮತ್ತಿತರರು ಇದ್ದರು.