ಹತ್ತಿಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ!

| N/A | Published : Oct 15 2025, 02:07 AM IST / Updated: Oct 15 2025, 05:54 AM IST

ಹತ್ತಿಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಅಕ್ರಮ ದಂಧೆಯ ಕರಾಳಮುಖಗಳು ಬಗೆದಷ್ಟೂ ಬಯಲಾಗುತ್ತಿದೆ. ಅಕ್ರಮ ದಾಸ್ತಾನು ಕೇವಲ ರೈಸ್‌ಮಿಲ್‌ಗಳಷ್ಟೇ ಅಲ್ಲ, ಹತ್ತಿ ಮಿಲ್‌ಗಳಲ್ಲಿಯೂ ಪಡಿತರ ಅಕ್ಕಿ ಅಡಗಿಸಿಡುತ್ತಿರುವುದು ಪತ್ತೆಯಾಗಿದೆ.

 ಆನಂದ್‌ ಎಂ. ಸೌದಿ

 ಯಾದಗಿರಿ :  ಇಲ್ಲಿನ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಅಕ್ರಮ ದಂಧೆಯ ಕರಾಳಮುಖಗಳು ಬಗೆದಷ್ಟೂ ಬಯಲಾಗುತ್ತಿದೆ. ಅಕ್ರಮ ದಾಸ್ತಾನು ಕೇವಲ ರೈಸ್‌ಮಿಲ್‌ಗಳಷ್ಟೇ ಅಲ್ಲ, ಹತ್ತಿ ಮಿಲ್‌ಗಳಲ್ಲಿಯೂ ಪಡಿತರ ಅಕ್ಕಿ ಅಡಗಿಸಿಡುತ್ತಿರುವುದು ಪತ್ತೆಯಾಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿನ 2 ರೈಸ್‌ಮಿಲ್‌ಗಳಲ್ಲಿ ಇದೇ ಸೆ.6 ರಂದು 3,985 ಕ್ವಿಂಟಾಲ್‌ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತೆರಳಿದ್ದ ಸಿಐಡಿ ತಂಡವೇ ಈಗ ಅಚ್ಚರಿಗೊಂಡಿದೆ.

ರೈಸ್‌ಮಿಲ್‌ಗಳಲ್ಲಿ ದಾಳಿ ನಡೆದರೆ ಇಡೀ ಕಳ್ಳದಾಸ್ತಾನು ಜಪ್ತಿ ಆಗಬಹುದು ಎಂಬ ಆತಂಕ ಕಳ್ಳಸಾಗಣೆದಾರರದ್ದು. ಹೀಗಾಗಿ ಇದರಿಂದ ಬಚಾವಾಗಲು, ಅಕ್ರಮ ದಾಸ್ತಾನನ್ನು ಹತ್ತಿ ಮಿಲ್‌ನ ಬೃಹದಾಕಾರದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಗುರುಮಠಕಲ್‌ನ ಲಕ್ಷ್ಮೀ ತಿಮ್ಮಪ್ಪ ಎಂಬ ಹೆಸರಿನ ಕಾಟನ್‌ ಮಿಲ್‌ನ 2ನೇ ಗೋದಾಮಿನಲ್ಲಿ ಸುಮಾರು 3 ಟನ್‌ ಪಡಿತರ ಅಕ್ಕಿ ದಾಸ್ತಾನು ಕಂಡುಬಂದಿದೆ.

ಪತ್ತೆ ಆಗಿದ್ದು ಹೇಗೆ?

ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮೀ ಬಾಲಾಜಿ ರೈಸ್‌ಮಿಲ್‌ಗಳಲ್ಲಿ ಜಪ್ತಿಯಾದ ದಾಸ್ತಾನು ಮಹಜರು ಮಾಡುತ್ತಿದ್ದ ಸಿಐಡಿ ತಂಡ, ಅಲ್ಲೇ ವೇ ಬ್ರಿಡ್ಜ್‌ನತ್ತ ತೆರಳಿತ್ತು. ಈ ವೇಳೆ, ಕುತೂಹಲದಿಂದ ಹತ್ತಿ ಮಿಲ್‌ನೊಳಗೂ ತೆರಳಿತ್ತು.

ಆಗ ಆಗ ಪಡಿತರ ಅಕ್ಕಿಯನ್ನು ಗೋಣಿಚೀಲಗಳಲ್ಲಿ ತುಂಬಿಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪತ್ತೆಯಾದ ಅಕ್ಕಿ 3 ಟನ್‌ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ಮೂಲಗಳು ತಿಳಿಸಿವೆ.

ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿನ ಅಕ್ಕಿ ಅಕ್ರಮದ ಘಾಟಿನ ಆಳವಾದ ತನಿಖೆ ನಡೆದರೆ ಪಿಎಸ್ಐ ಅಕ್ರಮವನ್ನೂ ಇದು ನಾಚಿಸಲಿದೆ ಎಂದು ಹೇಳಲಾಗುತ್ತಿದೆ.

ಗುರುಮಠಕಲ್‌ನಲ್ಲಿ ಸೆ.6ರಂದು ಪತ್ತೆಯಾಗಿದ್ದ ₹1.21 ಕೋಟಿ ಮೌಲ್ಯದ 3,985 ಕ್ವಿಂಟಾಲ್‌ ಪಡಿತರ ಅಕ್ಕಿ ದಾಸ್ತಾನು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್‌ ಹಾಗೂ ಎಸ್ಪಿ ಎಂ.ಡಿ.ಶರತ್‌ ನೇತೃತ್ವದಲ್ಲಿ ರಚನೆಗೊಂಡ, ತನಿಖಾಧಿಕಾರಿ ಅನಿಲ್‌ ಹಾಗೂ ಸಚಿನ್‌ ಮತ್ತವರ ತಂಡ ಕಳೆದೊಂದು ವಾರದಿಂದ ಗುರುಮಠಕಲ್‌ನಲ್ಲಿ ಬೀಡುಬಿಟ್ಟು ತನಿಖೆ ನಡೆಸುತ್ತಿದೆ.

ಕನ್ನಡಪ್ರಭ ಸೆ.8ರಂದು ವರದಿ ಮಾಡಿತ್ತು:

‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಎಂದು ಕನ್ನಡಪ್ರಭ ಮುಖಪುಟದಲ್ಲಿ ಸೆ.8ರಂದು ಪ್ರಕಟಗೊಂಡ ವರದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಖುದ್ದು ಸಿಎಂ ಸಿದ್ದರಾಮಯ್ಯ ಪತ್ರಿಕಾ ವರದಿಯನ್ನು ಎದುರಿಗಿಟ್ಟುಕೊಂಡು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಅಕ್ಕಿ ಅಕ್ರಮಕ್ಕೆ ಬ್ರೇಕ್‌ ಹಾಕುವ ಬಗ್ಗೆ ಸೂಚನೆ ನೀಡಿದ್ದರು.

ಆಗಿದ್ದೇನು?

- ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಸಾಗಿಸುವ ಜಾಲದ ತನಿಖೆಗೆ ಸಿಐಡಿ ತಂಡ ತೆರಳಿದಾಗ ಅಚ್ಚರಿ

- ಹತ್ತಿ ಮಿಲ್‌ನ ಗೋದಾಮಲ್ಲಿ ಸಂಗ್ರಹಿಸಿದ್ದ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ದಾಸ್ತಾನು ಪತ್ತೆ

- ಹತ್ತಿ ಮಿಲ್‌ ಗೋದಾಮಿನಲ್ಲಿ ಅಕ್ಕಿ ಇಟ್ಟರೆ ಸಿಕ್ಕಿಬೀಳಲ್ಲ ಎಂಬ ಐಡಿಯಾ ಮಾಡಿ ಇಡಲಾಗಿತ್ತು

- ಇದೀಗ ತನಿಖೆ ಮತ್ತಷ್ಟು ವಿಸ್ತಾರ ಸಂಭವ, ಅಕ್ಕಿ ಮಿಲ್‌ ಅಲ್ಲದೆ ಮಿಕ್ಕ ಕಡೆಗೂ ಶೋಧ ಸಂಭವ

Read more Articles on