ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳು ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಯೋಜನೆಗಳಲ್ಲಿ ಕೆಲ ಬದಲಾವಣೆ ತರಲು ಚಿಂತನೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾದರೆ, ಶಕ್ತಿ ಯೋಜನೆಯಲ್ಲಿ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಸಾರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಂತಹ ಕೆಲವು ಪ್ರಕರಣಗಳನ್ನು ಪರಿಶೀಲನೆ ಮಾಡುತ್ತಿದ್ದು, ಕೆಲವೊಂದು ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದರು.
ಗ್ಯಾರಂಟಿ ಕಿತ್ತಾಕಲು ಬಿಜೆಪಿ ಷಡ್ಯಂತ್ರ:ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ಒಂದೆಡೆ ಪ್ರಧಾನಿ ಮೋದಿಯವರು ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ. ಬಿಹಾರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಹಿಳೆಯರಿಗೆ ಹಣ ಕೊಡುತ್ತಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ತಮ್ಮ ಸರ್ಕಾರ ಬಂದರೆ ಎಲ್ಲವನ್ನೂ ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ. ಇಂಟರ್ ನಲ್ ಮೀಟಿಂಗ್ ಮಾಡಿ ಗ್ಯಾರಂಟಿ ಕಿತ್ತಾಕಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಈ ಯೋಜನೆಗಳನ್ನು ಕಿತ್ತಾಕಬೇಕು ಅಂತ ಇದ್ದಾರೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇಂದಿರಾ ಗಾಂಧಿ, ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರು ಕೊಟ್ಟ ಯೋಜನೆಗಳು ಈಗಲೂ ನಡೆಯುತ್ತಿವೆ. ಯಾವುದೇ ಯೋಜನೆ ನಿಲ್ಲಿಸಲು ಯಾರ ಕೈಯಲ್ಲೂ ಆಗುವುದಿಲ್ಲ ಎಂದು ಸವಾಲು ಹಾಕಿದರು.ಗ್ಯಾರಂಟಿ ಯೋಜನೆಗಳ ಜಾರಿಯಾದರೆ ಬಿಜೆಪಿಯವರು ಅತ್ತೆ- ಸೊಸೆಗೆ ಜಗಳ ತಂದಿಡುತ್ತಿದ್ದಾರೆಂದು ಟೀಕೆ ಮಾಡಿದರೆ, ಕುಮಾರಸ್ವಾಮಿಯವರು ಹೆಣ್ಣು ಮಕ್ಕಳು ದಾರಿ ತಪ್ಪಿಬಿಡುತ್ತಾರೆಂದು ಹೇಳಿದ್ದರು. ಈಗ ಗೃಹಲಕ್ಷ್ಮೀ, ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಬದುಕಿನಲ್ಲಿ ಬದಲಾವಣೆಗೊಂಡಿದ್ದು, ಸ್ವಾವಲಂಬಿ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಸಮಾಜದಲ್ಲಿ ದೊಡ್ಡ ಬದಲಾವಣೆ ತಂದಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ರವರು 25 ಸಾವಿರ ಲೀಡ್ ನಲ್ಲಿ ಗೆಲ್ಲಲು ಗ್ಯಾರಂಟಿ ಯೋಜನೆಗಳೇ ಕಾರಣ. ಈ ಗ್ಯಾರಂಟಿಯೇ ಸರ್ಕಾರವನ್ನು ಕಾಪಾಡುತ್ತದೆ. ಟೀಕೆ ಮಾಡುವವರು ಮಾಡಲಿ, ನಾವು ರಾಜಕೀಯವಾಗಿ ಎಲ್ಲವನ್ನು ಎದುರಿಸುತ್ತೇವೆ. ಜನ ರಾಜಕೀಯವಾಗಿ ನಮಗೆ ಶಕ್ತಿಕೊಟ್ಟಿದ್ದು, ನಾವು ಜನರ ಬದುಕಿಗೆ ಶಕ್ತಿ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ವೇದಿಕೆ ಕಾರ್ಯಕ್ರಮವನ್ನು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೇ ಉದ್ಘಾಟಿಸಿದ್ದು ವಿಶೇಷವಾಗಿತ್ತು. ವೇದಿಕೆ ಕಾರ್ಯಕ್ರಮ ಮುನ್ನ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು.
ಶಾಸಕರಾದ ಇಕ್ಬಾಲ್ ಹುಸೇನ್ , ಸಿ.ಪಿ.ಯೋಗೇಶ್ವರ್ , ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಬೆಂಗಳೂರು ವಿಭಾಗದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ, ರಾಮನಗರ ನಗರಸಭೆ ಅಧ್ಯಕ್ಷರಾದ ಶೇಷಾದ್ರಿ (ಶಶಿ), ಬೆಂಗಳೂರು ನಗರ ಜಿಲ್ಲೆಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ, ಕೋಲಾರ ಜಿಲ್ಲೆಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಸಿಇಒ ಅನ್ಮೋಲ್ ಜೈನ್ ಹಾಗೂ ಎಸ್ ಪಿ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.---------------------------------------
ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ಆಯೋಜಿಸಿ: ಡಿ.ಕೆ.ಶಿವಕುಮಾರ್ರಾಮನಗರ: ರಾಜ್ಯದ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ- ಜೆಡಿಎಸ್ ನವರು ಇಂಟರ್ ನಲ್ ಮೀಟಿಂಗ್ ಮಾಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಪಂಚಾಯಿತಿ ಮಟ್ಟದಲ್ಲಿ ವಾಟ್ಸ್ಯಾಪ್ ಗ್ರೂಪ್ ಮಾಡಿ ಚರ್ಚೆ ಮಾಡುವಂತೆಯೂ ತಿಳಿಸಿದರು.ಗ್ಯಾರಂಟಿ ಯೋಜನೆಯ ಸದಸ್ಯರು ಗ್ಯಾರಂಟಿ ರಾಯಭಾರಿಗಳಾಗಿದ್ದು, ಯೋಜನೆಗಳ ಪರಿಶೀಲನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದ್ದು, ಇವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಗಾರವನ್ನು ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ಇದರಿಂದ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.