ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳನ್ನು ವೀರಶೈವ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಶ್ರೀಮಠದ ಆವರಣದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳನ್ನು ವೀರಶೈವ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ಶ್ರೀಮಠದ ಆವರಣದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಅನಾರೋಗ್ಯದಿಂದ ಶುಕ್ರವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದ ಶ್ರೀಗಳ ಪಾರ್ಥೀವ ಶರೀರವನ್ನು ಹುಟ್ಟೂರು ಸವದಿ ಗ್ರಾಮಕ್ಕೆ ಒಯ್ದು ಭಕ್ತರ ದರ್ಶನ ಬಳಿಕ ಶುಕ್ರವಾರ ಮಧ್ಯರಾತ್ರಿ ಶ್ರೀಮಠಕ್ಕೆ ತರಲಾಯಿತು. ಶನಿವಾರ ಬೆಳಗ್ಗೆಯಿಂದ ಶ್ರೀಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ೪ ಗಂಟೆಗೆ ಅಂತ್ಯಸಂಸ್ಕಾರ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಶ್ರೀಗಳ ಪೂರ್ವ ಸೂಚನೆಯಂತೆ ಗೊತ್ತುಪಡಿಸಿದ ಸ್ಥಳದಲ್ಲಿ ಸಮಾಧಿ ಅಗೆಯುವಾಗ ಬಂಡೆಗಲ್ಲು ಹತ್ತಿದ್ದರಿಂದ ಅಂತ್ಯಸಂಸ್ಕಾರ ವಿಳಂಬವಾಯಿತು.ಬಳಿಕ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿದಂತೆ ನಾಡಿನ ಅನೇಕ ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀಮಠದ ಆವರಣದಲ್ಲಿ ಅನ್ನದಾನೇಶ್ವರ ಶ್ರೀಗಳ ಅಂತ್ಯಕ್ರಿಯೆ ನೆರವೇರಿತು.
ಈ ವೇಳೆ ಶ್ರೀಶೈಲ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅನ್ನದಾನೇಶ್ವರ ಶ್ರೀಗಳು ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ರಾಜ್ಯ ಅನೇಕ ಜಿಲ್ಲೆ, ಮಹಾರಾಷ್ಟ್ರ, ಅಂಧ್ರಪ್ರದೇಶ, ಗೋವಾ ರಾಜ್ಯಗಳು ಸೇರಿದಂತೆ ೧೮೭ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನದಾಸೋಹ ನೆರವೇರಿಸಿ ದಾಸೋಹ ರತ್ನ ಪ್ರಶಸ್ತಿ ಪಾತ್ರರಾಗಿದ್ದರು. ಕಬೀರದಾಸರು ಹೇಳಿದಂತೆ ಮಗು ಹುಟ್ಟುವಾಗ ಅಳುತ್ತಿದ್ದರೆ ನಾವೆಲ್ಲರೂ ನಗುತ್ತಿರುತ್ತೇವೆ. ಆದರೆ ಇಂದು ಸಮಾಜಕ್ಕೆ ಏನಾದರೊಂದು ಸಾಧನೆ ಮಾಡಿ ನಗುತ್ತಾ ಹೋದರೆ ಜನರು ಅಳುತ್ತಿರುತ್ತಿರಬೇಕು. ಹಾಗೆ ಬಂಡಿಗಣಿ ಶ್ರೀಗಳು ಭಕ್ತರ ಮನದಲ್ಲಿ ದಾಸೋಹ ಚಕ್ರವರ್ತಿ ಎಂಬ ಬಿರುದನ್ನು ಪಡೆದುಕೊಂಡು ಹೋದರು. ಅವರು ಇರುವಾಗ ಪರಮಾತ್ಮನ ಸ್ವರೂಪಿಗಳಾಗಿದ್ದರು. ಈಗ ಅವರೇ ಪರಮಾತ್ಮರಾಗಿ ಹೋಗಿದ್ದಾರೆಂದರು. ಹುಕ್ಕೇರಿ ಹಿರೇಮಠದ ಶ್ರೀಗಳು, ಬಬಲಾದಿ ಸಿದ್ರಾಮೇಶ್ವರ ಶ್ರೀಗಳು ಶ್ರೀಗಳ ಗುಣಗಾನ ಮಾಡಿದರು.ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಜಗದೀಶ ಗುಡಗುಂಟಿ, ಹಣಮಂತ ನಿರಾಣಿ, ಸಿದ್ದು ಸವದಿ, ಪಿ.ರಾಜೀವ್, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಶ್ರೀಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಬನಹಟ್ಟಿ ಹಿರೇಮಠದ ಶ್ರೀಶರಣಬಸವ ಶಿವಾಚಾರ್ಯರು, ಬಬಲಾದಿ ಚಿಕ್ಕಯ್ಯ ಅಜ್ಜನವರು, ಹಿಪ್ಪರಗಿ ಪ್ರಭು ಬೆನ್ನಾಳೆ ಮಹಾರಾಜರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಕುಡಚಿ ಶಾಸಕ ಪಿ. ರಾಜು, ಹಣಮಂತ ನಿರಾಣಿ, ಮುಖಂಡ ಸಿದ್ದು ಕೊಣ್ಣೂರ ಸೇರಿದಂತೆ ಅನೇಕರು ಮುಖಂಡರು ಭಾಗವಹಿಸಿದ್ದರು.
ರಾಜ್ಯದ ಅನೇಕ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಭಕ್ತರ ಅಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲೆಂದರಲ್ಲಿ ಮಹಿಳೆಯರು, ಮಕ್ಕಳು ಅಪ್ಪ ನಮ್ಮನ್ನು ಬಿಟ್ಟು ಹೋದೆ ನಾವು ಅನಾಥರಾದೆವು ಎಂಬ ಉದ್ಘಾರಗಳು ಕೇಳಿಬರುತ್ತಿದ್ದವು.ಸಾವಿನಲ್ಲೂ ಅನ್ನದಾಸೋಹ: ಅಂತ್ಯಸಂಸ್ಕಾರಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ಭಕ್ತರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರು. ಕುಡಿಯುವ ನೀರು, ಉಳಿದುಕೊಳ್ಳುವ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಅನಾನುಕೂಲ ಆಗದಂತೆ ಮಠದ ಭಕ್ತರು ವ್ಯವಸ್ಥೆ ಮಾಡಿದ್ದರು. ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ನೇತೃತ್ವದಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.ಗ್ರಾಮದಿಂದ ಎರಡು ಕಿಮೀ ಆಚೆಯೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಭಕ್ತರು ಕಾಲ್ನಡಿಗೆ ಮೂಲಕ ಶ್ರೀಮಠಕ್ಕೆ ಬರುವ ವ್ಯವಸ್ಥೆ ಮಾಡಲಾಗಿತ್ತು.