ಕೆಐಎಡಿಬಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ರಾಜ್ಯ ಸರ್ಕಾರ ಈವರೆಗೆ ಕೈಗೊಂಡ ಭೂ ಸ್ವಾಧೀನ, ಭೂ ಹಂಚಿಕೆ, ಸದ್ಭಳಕೆ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಕುರಿತಂತೆ ಶ್ವೇತಪತ್ರ ಹೊರಡಿಸಲಿ ಎಂದು ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ, ಕೃಷಿ ವಿಜ್ಞಾನಿ ಡಾ.ಪ್ರಕಾಶ್‌ ಕಮ್ಮರಡಿ ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಪೂರಕವಾದ ಸಮಗ್ರ ಭೂ ಸ್ವಾಧೀನ ನೀತಿಯನ್ನು ಬರುವ ಬಜೆಟ್‌ನಲ್ಲಿ ಘೋಷಿಸುವ ಜತೆಗೆ ಕೆಐಎಡಿಬಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ರಾಜ್ಯ ಸರ್ಕಾರ ಈವರೆಗೆ ಕೈಗೊಂಡ ಭೂ ಸ್ವಾಧೀನ, ಭೂ ಹಂಚಿಕೆ, ಸದ್ಭಳಕೆ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಕುರಿತಂತೆ ಶ್ವೇತಪತ್ರ ಹೊರಡಿಸಲಿ ಎಂದು ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ, ಕೃಷಿ ವಿಜ್ಞಾನಿ ಡಾ.ಪ್ರಕಾಶ್‌ ಕಮ್ಮರಡಿ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಉಳುವವನಿಗೆ ಹೊಲದೊಡೆತನದಂತಹ ಮಹದಾಶಯವನ್ನು ಸಾಕಾರಗೊಳಿಸಿ, ಕ್ರಾಂತಿಕಾರಕ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿದ್ದ ಕರ್ನಾಟಕದಲ್ಲೇ ರೈತರು ಇಂದು ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಬೆಂಗಳೂರಿನ ದೇವನಹಳ್ಳಿ, ಚನ್ನಗರಿ ಪಟ್ಟಣದ ಹೋಬಳಿ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ವಿರೋಧಿಸಿ 3 ವರ್ಷ ನಿರಂತರ ಹೋರಾಟ ಮಾಡಿ, ಭೂಮಿ ಉಳಿಸಿಕೊಂಡರು. ರಾಜ್ಯದ ಇತರೆಡೆ ಹೋರಾಟ ನಡೆದೇ ಇದೆ ಎಂದರು.

ಕೃಷಿ ಯೋಗ್ಯ ಭೂಮಿಯನ್ನು ಭೂ ಪರಿವರ್ತನೆ ಮಾಡಬಾರದು. ರಾಜ್ಯದಲ್ಲಿ ಸುಮಾರು 70-80 ಸಾವಿರಕ್ಕೂ ಅದಿಕ ಕೃಷಿ ಭೂಮಿ ಭೂ ಸ್ವಾಧೀನಪಡಿಸಿಕೊಂಡ ಕೆಐಎಡಿಬಿ ಅದನ್ನು ಬಳಕೆ ಮಾಡಿದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಭೂ ಸ್ವಾಧೀನಪಡಿಸಿಕೊಂಡ ಭೂಮಿ ಉದ್ದೇಶಿತ ಕಾರ್ಯಕ್ಕೆ ಸದ್ಭಳಕೆ ಆಗಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಅನೇಕ ಕಡೆ ಹೀಗೆ ಭೂ ಸ್ವಾಧೀನ ಆದ ಭೂಮಿಯಲ್ಲಿ ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‌ಗಳು ತಲೆ ಎತ್ತಿ ನಿಂತಿವೆ ಎಂದು ದೂರಿದರು.

ಕೆಐಎಡಿಬಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ರಾಜ್ಯ ಸರ್ಕಾರ ಇದುವರೆಗೆ ಕೈಗೊಂಡ ಭೂ ಸ್ವಾಧೀನ, ಅದರ ಹಂಚಿಕೆ, ಸದ್ಭಳಕೆ, ಉದ್ಯೋಗ ಸೃಷ್ಟಿ ಇತ್ಯಾದಿ ವಿಷಯಗಳ ಕುರಿತಂತೆ ಶ್ವೇತಪತ್ರ ಹೊರಡಿಸಬೇಕು. ರೈತರವನ್ನು ವಿಶ್ವಾಸಕ್ಕೆ ಪಡೆಯುವವರೆಗೆ ರಾಜ್ಯ ಸರ್ಕಾರ ಯಾವುದೇ ಭೂ ಸ್ವಾಧೀನಕ್ಕೆ ಪ್ರಯತ್ನಿಸಬಾರದು. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಈ ಹಿಂದಿನ ಸರ್ಕಾರ ತಂದಿರುವ ಮಾರಕ ಬದಲಾವಣೆಗಳನ್ನು ಹಿಂಪಡೆದು, ಕಾಯ್ದೆಗೆ ಪುನರ್ ಚೇತನ ನೀಡಬೇಕು. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆಗೆ ಮುಂಬರುವ ಬಜೆಟ್‌ನಲ್ಲಿ ಸಮಗ್ರ ಭೂ ಸ್ವಾಧೀನ ನೀತಿ ಘೋಷಿಸುವ ಶಿಫಾರಸನ್ನು ರಾಜ್ಯ ಸರ್ಕಾರದ ಮುಂದಿಡಲಿದ್ದೇವೆ ಎಂದು ಸ್ಪಷ್ಚಪಡಿಸಿದರು.

ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳಿಗಿಂತಲೂ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳೇ ಇಂದು ರೈತರು, ಜನಪರವಾಗಿವೆ. ಕೈಗಾರಿಕೆಗೆ ನಾವು ಭೂಮಿ ಕೊಡದಿದ್ದರೆ ಆಂಧ್ರದಲ್ಲಿ 1 ರು.ಗೆ ತಮಿಳುನಾಡಿನಲ್ಲಿ 2 ರು.ಗೆ ಭೂಮಿ ಕೊಡುತ್ತಾರೆಂದು ಬೆದರಿಸುವ ಕೆಲಸವೂ ರಾಜ್ಯದಲ್ಲಿ ಆಗುತ್ತಿದೆ. ಸಮಯಕ್ಕೆ ಸರಿಯಾಗಿ ವಿದ್ಯುತ್, ನೀರು ಸೌಕರ್ಯ ನೀಡಿದರೆ ಯಾವುದೇ ಕೈಗಾರಿಕೆ ಬರುತ್ತವೆ. ರಾಜ್ಯದಲ್ಲಿ ಕೃಷಿಗೆ ಬಳಕೆಯಾಗದ ಸಾಕಷ್ಟು ಭೂಮಿ ಇದೆ. ಅಂತಹ ಕಡೆ ಕೈಗಾರಿಕೆಗಳನ್ನು ಸ್ಥಾಪಿಸಿ, ಕೃಷಿ ಯೋಗ್ಯವಾದ ಭೂಮಿ ಕೃಷಿಗೆ ಬಿಡಿ. ಭೂ ಸ್ವಾಧೀನಪಡಿಸಿಕೊಂಡು, ಕೈಗಾರಿಕೆ, ಕಂಪನಿಗಳಿಗೆ ನೀಡಿದಾಗ ಅದರಲ್ಲಿ ರೈತರನ್ನು ಪಾಲುದಾರ ಅಥವಾ ಶೇರುದಾರನಾಗಿಸುವ ಕಾಯ್ದೆ ತನ್ನಿ ಎಂದು ಡಾ.ಪ್ರಕಾಶ ಕಮ್ಮರಡಿ ಮನವಿ ಮಾಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್, ಶ್ರೀನಿವಾಸ ಇತರರು ಇದ್ದರು.