ಸಾರಾಂಶ
ಯಲ್ಲಾಪುರ: ತಾಲೂಕಿನ ಕಾನಗೋಡು ಸ.ಹಿ.ಪ್ರಾ. ಶಾಲೆಯ ಸಾರಂಗ ರಂಗ ಮಂದಿರದ ಆವಾರದಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಜಿಗಳೂರ ಅಂಕುರ ಕೈಬರಹ ಪತ್ರಿಕೆ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಏಳನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಭೆ ಪ್ರದರ್ಶಿಸಲು ನಲಿ-ಕಲಿ ಅವಕಾಶ ನೀಡಿದೆ. ಪುಟ್ಟ ಮಕ್ಕಳು ತಮ್ಮ ವಯಸ್ಸಿಗೆ ನಿಲುಕುವ ರೀತಿಯಲ್ಲಿ ಚಿತ್ರಕಲೆ, ಚುಟುಕು, ಕಥೆ, ಕವನ, ಗಾದೆ ಮಾತು ಮುಂತಾದ ಚಟುವಟಿಕೆಯನ್ನು ಒಳಗೊಂಡ ಈ ಹಸ್ತಪತ್ರಿಕೆ ರಚಿಸಿದ್ದು, ಮಕ್ಕಳ ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಕಿರಣ ಆರ್. ಹೆಗಡೆ ಮಾತನಾಡಿ, ಶಾಲೆಯ ಬಿಸಿಯೂಟ ಕೋಣೆ ಮತ್ತು ನಲಿ-ಕಲಿ ಕೊಠಡಿ ಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅದರ ರಿಪೇರಿ ತಕ್ಷಣ ಆಗಬೇಕಿದೆ ಎಂದರು.ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಶರಾವತಿ ಗಜಾನನ ಭಟ್ಟ, ಉಮ್ಮಚಗಿ ಗ್ರಾಪಂ ಉಪಾಧ್ಯಕ್ಷೆ ಗಂಗಾ ಕಿರಣ ಹೆಗಡೆ, ಉಮ್ಮಚಗಿ ಸಿಆರ್‌ಪಿ ವಿಷ್ಣು ಭಟ್ಟ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಆದ್ಯಾ ರಾಘವೇಂದ್ರ ಹೆಗಡೆ, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಪರಿಣಿತಾ ಜಗನ್ನಾಥ ನಾಯ್ಕ ಹಾಗೂ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ರಿತೇಶ ಚಂದ್ರ ದೇವಾಡಿಗ ಈ ಮೂವರನ್ನು ಸನ್ಮಾನಿಸಲಾಯಿತು.ಪರಿಣಿತಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಪ್ರೇಮಾವತಿ ಕೆ. ಭಟ್ಟ ಸ್ವಾಗತಿಸಿದರು. ಸಹಶಿಕ್ಷಕಿ ರೇಖಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಲಲಿತಾ ಮರಾಠಿ ವಂದಿಸಿದರು.
ಆನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುಜಾತಾ ಹೆಗಡೆ ಕಾಗಾರಕೊಡ್ಲು ನಿರ್ದೇಶನದ, ನಾಗರಾಜ ಭಟ್ಟ ಕೆಕ್ಕಾರ ವಿರಚಿತ, ಪುಸ್ತಕ ಆಧಾರಿತ ''''''''ನಮ್ಮೂರಿನಲ್ಲಿ ಸ್ವಾತಂತ್ರ‍್ಯ ಸಂಗ್ರಾಮ'''''''' ಎಂಬ ನಾಟಕ ಪ್ರದರ್ಶನಗೊಂಡಿತು.