ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ ಸಿಂಗ್ ಅವರ ನಿಧನಕ್ಕೆ ಗೌರವಾರ್ಥವಾಗಿ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಶುಕ್ರವಾರ ಕೆಪಿಸಿಸಿ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಜನಾಂದೋಲನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಬೇಕಿತ್ತು. ಇದಕ್ಕೆ ಸಿಪಿಎಡ್ ಮೈದಾನದಲ್ಲಿ ಸಾವಿರಾರು ಜನರು ಸೇರುವ ಬೃಹತ್ ವೇದಿಕೆಯನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಅದೇ ವೇದಿಕೆಯೇ ಶೋಕಾಚರಣೆ ಸ್ಥಳವಾಗಿ ಮಾರ್ಪಟ್ಟಿತು. ಈ ವೇಳೆ ಎಐಸಿಸಿ ಪದಾಧಿಕಾರಿಗಳು, ಹಲವಾರು ರಾಜ್ಯಗಳ ಪಿಸಿಸಿ ಅಧ್ಯಕ್ಷರು, ಸಂಸದರು, ಸಚಿವರು, ಶಾಸಕರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅದ್ಧೂರಿ ಆಚರಣೆಗೆ ಸಿಪಿಎಡ್ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. ಇದಕ್ಕಾಗಿ 20 ದಿನಗಳಿಂದ ಭರದ ಸಿದ್ಧತೆ ನಡೆದಿದ್ದವು. ಆದರೆ, ದುರಾದೃಷ್ಟವಶಾತ್ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ ಸಿಂಗ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎರಡನೇ ದಿನದ ಕಾಂಗ್ರೆಸ್ ಅಧಿವೇಶನ ರದ್ದುಗೊಳಿಸಲಾಯಿತು. ಈಗ ಅದೇ ವೇದಿಕೆಯ ಮೇಲೆಯೇ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಗುರುವಾರ ರಾತ್ರಿಯೇ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಅದರಂತೆಯೇ ಶತಮಾನೋತ್ಸವ ವೇದಿಕೆಯ ಮೇಲೆಯೇ ಮನಮೋಹನ ಸಿಂಗ್ ಅವರ ಭಾವಚಿತ್ರ ಇರಿಸಿ, ಪುಷ್ಪಾಚರಣೆ ಮಾಡಿ ವೇದಿಕೆ ಮೇಲಿದ್ದ ಹಲವಾರು ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಎಲ್ಲ ನಾಯಕರು ಸ್ಮರಿಸುವ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ಕೂಡ ನಡೆಸಲಾಯಿತು.ಶ್ರದ್ಧಾಂಜಲಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಭೈರತಿ ಸುರೇಶ, ಎಚ್.ಸಿ.ಮಹದೇವಪ್ಪ, ಹಿರಿಯ ಮುಖಂಡರು ಭಾಗವಹಿಸಿದ್ದರು. ರಾಷ್ಟ್ರೀಯ ಕಾಂಗ್ರೆಸ್ ನಾಯಕರು, ಸಂಸದರು ಕೂಡ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೆ ವೇಳೆ ಕೆಲವು ನಾಯಕರು ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.