ಗೋವಾ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದ ಮತ್ತೊಂದು ಯತ್ನ

| Published : Feb 19 2025, 12:48 AM IST

ಗೋವಾ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದ ಮತ್ತೊಂದು ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಆರ್ಥಿಕ ಹಿಂಜರಿತಕ್ಕೂ ಮುನ್ನವೇ ವಲಸಿಗರನ್ನು ಹೊರಹಾಕಿ ಸ್ಥಳೀಯರಿಗೆ ಉದ್ಯೋಗ ಉಳಿಸಿಕೊಳ್ಳಲು ಗೋವನ್ನರು ನಡೆಸಿರುವ ತೀವ್ರ ಹೋರಾಟದಲ್ಲಿ ಅತಂತ್ರರಾಗುತ್ತಿರುವ ಗೋವಾ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಈಗ ಮುಂದಾಗಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ: ಜಾಗತಿಕ ಆರ್ಥಿಕ ಹಿಂಜರಿತ (ರಿಸೆಸೆನ್‌)ಕ್ಕೂ ಮುನ್ನವೇ ವಲಸಿಗರನ್ನು ಹೊರಹಾಕಿ ಸ್ಥಳೀಯರಿಗೆ ಉದ್ಯೋಗ ಉಳಿಸಿಕೊಳ್ಳಲು ಗೋವನ್ನರು ನಡೆಸಿರುವ ತೀವ್ರ ಹೋರಾಟದಲ್ಲಿ ಅತಂತ್ರರಾಗುತ್ತಿರುವ ಗೋವಾ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಈಗ ಮುಂದಾಗಿದೆ.

ಈ ಪ್ರಯತ್ನದ ಭಾಗವಾಗಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರಿಗೆ ಇದೇ ಫೆ.14 ರಂದು ಪತ್ರ ಬರೆದು, ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಬಂದಿರುವ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಗೋವಾದಲ್ಲಿನ ಕರ್ನಾಟಕದ ವಲಸೆ ಕಾರ್ಮಿಕರ ದುಃಸ್ಥಿತಿ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕನ್ನಡಿಗರಿಗೆ ಉಂಟಾಗುತ್ತಿರುವ ತೊಂದರೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಗೋವಾ ಮತ್ತು ಕರ್ನಾಟಕಕ್ಕೆ ಸಾಂಸ್ಕೃತಿಕ ಬಂಧವಿದೆ. ಎರಡೂ ರಾಜ್ಯಗಳು ಆತಿಥ್ಯಕ್ಕೆ ಹೆಸರಾಗಿವೆ. ಜನರ ಜೀವನಕ್ಕೆ ಮೂಲ ಅವಶ್ಯಕತೆಗಳಾದ ಉದ್ಯೋಗ, ಪಡಿತರ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಸೂರು, ರಕ್ಷಣೆ ಸೇರಿದಂತೆ ಇತರ ಸಾಮಾಜಿಕ ಸೌಲಭ್ಯಗಳನ್ನು ಕರ್ನಾಟಕದ ವಲಸೆ ಕಾರ್ಮಿಕರಿ ನೀಡುವಂತೆ ಸಚಿವ ಲಾಡ ಪತ್ರದಲ್ಲಿ ವಿನಂತಿಸಿದ್ದಾರೆ.

ಸ್ಥಳೀಯರಿಗೆ ಉದ್ಯೋಗ

ಜಗತ್ತಿನಾದ್ಯಂತ ಮತ್ತೆ ಆರ್ಥಿಕ ಹಿಂಜರಿತದ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಉದ್ಯೋಗಗಳು ಬೇರೆಯವರ ಪಾಲಾಗಬಾರದು ಮತ್ತು ಈಗಾಗಲೇ ಉದ್ಯೋಗ ಕಿತ್ತುಕೊಂಡಿರುವ ವಲಸಿಗರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲ ರೀತಿಯಿಂದ ಗೋವನ್ನಿಗೆ ಪೈಪೋಟಿ ಒಡ್ಡುತ್ತಿರುವ ಕನ್ನಡಿಗರನ್ನು ಆಯಾ ಕೆಲಸಗಳಿಂದ ಹೊರಹಾಗುವ, ಅವರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯುವ ಕಾರ್ಯ ಗೋವಾದಲ್ಲೀಗ ಬಿರುಸಿನಿಂದ ನಡೆಯುತ್ತಿದೆ.

"ಪೋಗೋ " (ಪರ್ಸನ್‌ ಆಫ್‌ ಓರಿಜಿನಲ್ ಗೋವನ್ಸ್) ಮತ್ತು "ರೆವಲೂಶ್ನರಿ ಗೋವನ್ಸ್ " ಆಂದೋಲನಗಳು ಗೋವಾದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿವೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಕೈಗೂಡಿಸಿ ಎನ್ನುವ ಕರೆಗೆ ಮೂಲ ಗೋವನ್ನರಿಂದ ಭಾರೀ ಸ್ಫಂದನೆ ಸಿಗುತ್ತಿದೆ. ಈ ಹೋರಾಟ ವಲಸಿಗರಲ್ಲಿ ತಲ್ಲಣ ಹುಟ್ಟಿಸಿದೆ. ಈ ಹೋರಾಟವನ್ನು ಧಿಕ್ಕರಿಸುವ ಶಕ್ತಿ ಗೋವಾ ಸರ್ಕಾರಕ್ಕೆ ಇಲ್ಲ. ಹೀಗೆ ಹೋರಾಟಗಾರರನ್ನು ಮುಂದೆ ಬಿಟ್ಟು ವಲಸಿಗರನ್ನು ಹೊರಹಾಕಲು ಗೋವಾ ಸರ್ಕಾರ ಯತ್ನಿಸುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸಿಂಧ್ಯ, ಎಚ್ಕೆ, ಖರ್ಗೆ, ಲಾಡ್‌

2005 ರಲ್ಲಿ ನಡೆದ ಬೈನಾ ಬೀಚ್‌ ಅಭಿವೃದ್ಧಿ ಮತ್ತು ಹೆದ್ದಾರಿ ವಿಸ್ತರಣೆ ನೆಪದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋವಾ ಸರ್ಕಾರ ಅಲ್ಲಿನ 1162 ಕನ್ನಡಿಗ ಕುಟುಂಬಗಳನ್ನು ರಾತ್ರೋ ರಾತ್ರಿ ಒಕ್ಕಲೆಬ್ಬಿಸಿತ್ತು.

"ಕನ್ನಡಪ್ರಭ " ಬಯಲಿಗೆಳೆದ ಈ ದುರಂತ ವರದಿಗೆ ಸ್ಪಂಧಿಸಿದ ಕರ್ನಾಟಕ ಸರ್ಕಾರ ಆಗ ತನ್ನ ಪ್ರತಿನಿಧಿಗಳನ್ನಾಗಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯ ಮತ್ತು ಎಚ್‌.ಕೆ.ಪಾಟೀಲ್ ಅವರನ್ನು ಗೋವೆಗೆ ಕಳಿಸಿತ್ತು. ಸಿಂಧ್ಯ-ಎಚ್ಕೆ ಮಾತುಕತೆ ನಡೆಸುವ ಮೂಲಕ ವಲಸಿಗ ಕನ್ನಡಿಗರಿಗೆ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಅಂದಿನ ಕೆಂದ್ರ ಸರ್ಕಾರ ಕೂಡ ಈ ಸಮಸ್ಯೆಗೆ ಸ್ಪಂದಿಸಿ ಗೋವಾ ಸರ್ಕಾರಕ್ಕೆ ಕಿವಿಮಾತು ಹೇಳಿತ್ತು.

ಆದಾಗ್ಯೂ ವಲಸಿಗರ ಬಗೆಗಿನ ಗೋವಾ ಸರ್ಕಾರದ ಯಾವುದೇ ನಿಲುವು ಬದಲಾಗಲೇ ಇಲ್ಲ. ಹಾಗಾಗಿ ಬೈನಾದಿಂದ ಒಕ್ಕಲೆಬ್ಬಿಸಲಾದ ಕನ್ನಡಿಗರು ಭಾರೀ ಸಂಕಷ್ಟ ಎದುರಿಸಿದರು. ಹಲವರು ತಾಯ್ನಾಡಿಗೆ ವಾಪಸ್‌ ಆಗಿದ್ದರೆ, ಇತ್ತ ಊರಲ್ಲೂ ಏನೂ ಇಲ್ಲದವರು ಅಲ್ಲೆ ವರ್ಷಗಟ್ಟಲೇ ಬೀದಿ ಬಡಿಯಲ್ಲಿ ಬದುಕು ಸಾಗಿಸಿದರು.

2008 ರಲ್ಲಿ ವಾಸ್ಕೋದ ಬಿರ್ಲಾ ರಸಗೊಬ್ಬರ ಕಾರ್ಖಾನೆ ಆಡಳಿತ ಮಂಡಳಿ ಗೋವಾ ಸರ್ಕಾರ ಆಣತಿಯಂತೆ 800 ಕನ್ನಡಿಗ ಕಾರ್ಮಿಕರನ್ನು ಏಕಕಾಲಕ್ಕೆ ವಜಾಗೊಳಿಸಿತ್ತು. ಆಗಲೂ ಕನ್ನಡಪ್ರಭ ಈ ಘಟನೆಯ ಮೇಲೆ ಬೆಳಕು ಚೆಲ್ಲುವ ವಿಸ್ತೃತ ವರದಿ ಮಾಡಿತ್ತು. ಅಂದು ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರು ಈ ವರದಿ ಗಮನಿಸಿ ಬಿರ್ಲಾ ಕಂಪೆನಿ ಮತ್ತು ಗೋವಾ ಸರ್ಕಾರದೊಂದಿಗೆ ಮಾತನಾಡಿ ವಜಾಗೊಂಡ ಕನ್ನಡಿಗ ಕಾರ್ಮಿಕರನ್ನು ವಾಪಸ್‌ ಸೇವೆಗೆ ಸೇರುವಂತೆ ಮಾಡಿದ್ದರು.

ಖರ್ಗೆ ಅವರ ಖಡಕ್‌ ಎಚ್ಚರಿಕೆಯಿಂದಾಗಿ ಗೋವಾ ಸರ್ಕಾರ ವಲಸಿಗರೂ ತನ್ನ ನೆಲಸ ನಾಗರೀಕರು ಎಂದು ಭಾವಿಸಿ ಮತದಾನದ ಹಕ್ಕು, ಪಡಿತರ, ಸರ್ಕಾರಿ ಸೂರು, ಆರೋಗ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಯಾವುದೇ ತಾರತಮ್ಯ ಇಲ್ಲದೇ ನೀಡಲು ಶುರುಮಾಡಿತು.

ಈಗ ಇಂಥದೇ ಪ್ರಯತ್ನ ಸಚಿವ ಸಂತೋಷ್ ಲಾಡ್ ಅವರಿಂದ ಆಗಿದೆ.