ಕಬ್ಬಿನ ಜಮೀನಿಗೆ ಕಾಡಾನೆಗಳ ಹಿಂಡು ದಾಳಿ

| Published : Feb 19 2025, 12:48 AM IST

ಸಾರಾಂಶ

ತಾಲೂಕಿನ ಓಂಕಾರ ವಲಯದಂಚಿನ ಸವಕನಹಳ್ಳಿ ಬಳಿ ರೈತರೊಬ್ಬರ ಕಬ್ಬಿನ ಜಮೀನಿಗೆ ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು, ಈ ಸಮಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಕಬ್ಬು ಬೆಂಕಿಗಾಹುತಿಯಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಓಂಕಾರ ವಲಯದಂಚಿನ ಸವಕನಹಳ್ಳಿ ಬಳಿ ರೈತರೊಬ್ಬರ ಕಬ್ಬಿನ ಜಮೀನಿಗೆ ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು, ಈ ಸಮಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಕಬ್ಬು ಬೆಂಕಿಗಾಹುತಿಯಾಗಿದೆ.

ಸವಕನಹಳ್ಳಿ ಗ್ರಾಮದ ಚಿಕ್ಕವೀರಯ್ಯಗೆ ಸೇರಿದ ಕಬ್ಬಿನ ಜಮೀನಿಗೆ ಮಂಗಳವಾರ ಮುಂಜಾನೆ 5 ಆನೆಗಳ ಹಿಂಡು ದಾಳಿ ಇಟ್ಟು ಕಬ್ಬನ್ನು ತುಳಿದು ನಾಶ ಪಡಿಸುವ ಸುದ್ದಿ ತಿಳಿದು ಓಂಕಾರ ಅರಣ್ಯ ಸಿಬ್ಬಂದಿ ದಾವಿಸಿದ್ದಾರೆ. ಕಾಡಾನೆಗಳ ದಾಳಿಗೆ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗೊಂಡು ಕೂಗಾಟ ನಡೆಸಿದ್ದಾರೆ. ಈ ಸಮಯದಲ್ಲಿ ಕಬ್ಬಿನಗದ್ದೆಯಲ್ಲಿದ್ದ ಕಾಡಾನೆ ಹಿಂಡು ಓಡಿಸುವ ಸಮಯದಲ್ಲಿ ಪಟಾಕಿ ಸಿಡಿಸಿದ್ದಾರೆ ಈ ವೇಳೆ ಕಬ್ಬಿಗೆ ಬೆಂಕಿ ಕಾಣಿಸಿದೆ.

ಎಸಿಎಫ್‌ ಭೇಟಿ:

ಕಾಡಾನೆಗಳ ದಾಳಿ ಹಾಗೂ ಕಬ್ಬಿನ ತೋಟ ಬೆಂಕಿಗೆ ಆಹುತಿಯಾದ ವಿಷಯ ತಿಳಿದು ಎಸಿಎಫ್‌ ಸುರೇಶ್‌ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್‌ ಸ್ಥಳಕ್ಕಾಗಮಿಸಿ ರೈತರನ್ನು ಸಮಾಧಾನ ಪಡಿಸಿದರು. ಇಲಾಖೆಯಿಂದ ಪರಿಹಾರ ಕೊಡುವ ಭರವಸೆ ನೀಡಿದ ಬಳಿಕ ರೈತರು ಸಮಾಧಾನ ಗೊಂಡಿದ್ದಾರೆ.

ಹೊಂಗಳ್ಳಿ ಬಳಿ 4 ಕರುಗಳನ್ನು

ಚಿರತೆ ಸಾಯಿಸಿ ಅಟ್ಟಹಾಸ

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದಂಚಿನ ಹೊಂಗಳ್ಳಿ ಬಳಿಯ ತೋಟದ ಮನೆ ಬಳಿ ನಾಲ್ಕು ಕರುಗಳನ್ನು ಚಿರತೆ ಸಾಯಿಸಿ ಅಟ್ಟಹಾಸ ಮೆರೆದಿದೆ. ಗ್ರಾಮದ ನಾಗಪ್ಪಗೆ ಸೇರಿದ ನಾಲ್ಕು ಹಸುವಿನ ಕರುಗಳಿದ್ದ ಕೊಟ್ಟಿಗೆಗೆ ಚಿರತೆ ಸೋಮವಾರ ರಾತ್ರಿ ದಾಳಿಯಿಟ್ಟು ಕರುಗಳನ್ನು ಕಚ್ಚಿ ಗಾಯಗೊಳಿಸಿದ್ದು, ಒಂದು ಕರುವನ್ನು ಎಳೆದುಕೊಂಡು ಹೋಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಮೇಲೆ ಕೆಲ ರೈತರು ತಳ್ಳಾಟ ನೂಕಾಟ ನಡೆಸಿ ಬೈದು ಸಿಬ್ಬಂದಿ ದಿಗ್ಭಂದನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸಿಎಫ್‌ ಸುರೇಶ್‌ ಹಾಗೂ ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್‌ ಸ್ಥಳಕ್ಕಾಗಮಿಸಿ ರೈತರ ಜಮೀನಿನಲ್ಲಿ ಬೋನು ಇರಿಸುವ ಮೂಲಕ ಹಾಗು ಚಿರತೆಗೆ ಬಲಿಯಾದ ಹಸುವಿನ ಕರುಗಳಿಗೆ ಪರಿಹಾರ ನೀಡುವುದಾಗಿ ಹೇಳಿ ರೈತರ ಸಮಾಧಾನ ಪಡಿಸಿದ್ದಾರೆ. ಒಂದೇ ದಿನ ಚಿರತೆ 4 ಕರುಗಳನ್ನು ಸಾಯಿಸಿದ್ದನ್ನು ಕಂಡ ರೈತರು ಆತಂತಕ್ಕೆ ಒಳಗಾಗಿದ್ದು ರೈತರು ಜಾನುವಾರುಗಳಿಗೆ ಕಂಟಕವಾದ ಚಿರತೆ ಸೆರೆ ಹಿಡಿದು ಬೇರೆಡೆ ಬಿಡಬೇಕು ಎಂದು ಆಗ್ರಹಿಸಿದ್ದಾರೆ.