ರಾಣಿಬೆನ್ನೂರು: ನಗರದ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡ 177.22 ಲಕ್ಷ ರು.ಗಳ ಉಳಿತಾಯ ಬಜೆಟ್‌ನ್ನು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮಂಡಿಸಿದರು.ಮಹಿಳೆಯರಿಗಾಗಿ ಪಿಂಕ್ ಪಾರ್ಕ್ ನಿರ್ಮಾಣ, ರಾಜ ಕಾಲುವೆ ಅಭಿವೃದ್ಧಿ, ನಗರಸಭಾ ಹೈಸ್ಕೂಲ್ ಅಭಿವೃದ್ಧಿ, ನಗರದ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗಳು, ಚರಂಡಿಗಳ ನಿರ್ಮಾಣ, ನಗರದಲ್ಲಿನ ಎಲ್ಲಾ ನಾಗರಿಕರಿಗೂ ಸಮರ್ಪಕ ಕುಡಿಯುವ ನೀರಿನ ಪೂರೈಕೆ, ನಗರದ ಆಯ್ದ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಾಣ, ಸ್ಮಶಾನದ ಅಭಿವೃದ್ಧಿ, ನಗರದ ವಿವಿಧ ಸ್ಥಳಗಳಲ್ಲಿ ಶೌಚಾಲಯಗಳ ನಿರ್ಮಾಣ ಹಾಗೂ ದುರಸ್ತಿ, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ, ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಲ್ಯಾಂಡ್‌ಫಿಲ್ ಸೈಟ್ ಅಭಿವೃದ್ಧಿ, ಯುಜಿಡಿ ಕಾಮಗಾರಿಗಳಿಗೆ ಒತ್ತು, ಪ್ರಮುಖ ಸರ್ಕಲ್‌ಗಳ ಅಭಿವೃದ್ಧಿ, ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಹಣ ಮೀಸಲು ಇಡಲಾಗಿದೆ ಎಂದು ಅವರು ತಿಳಿಸಿದರು. ಇಲ್ಲಿನ ನಗರಸಭೆ ಸರ್.ಎಂ.ವಿಶ್ವೇಶರಯ್ಯ ಸಭಾಭವನದಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ರಾಜ್ಯದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಇದಾಗಿದೆ. ವ್ಯವಹಾರ-ಉದ್ಯೋಗ, ಶಿಕ್ಷಣ ಇತ್ಯಾದಿ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಪ್ರಾಥಮಿಕ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಇತ್ಯಾದಿಗಳಿಂದ ಒಟ್ಟು 2422.89 ಲಕ್ಷ ರು.ಗಳ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತ ನಿಧಿಯ 283.00 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 866.00 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ 715.00 ಲಕ್ಷ, ಕೇಂದ್ರ ಸರ್ಕಾರದ 16ನೇ ಹಣಕಾಸು ಯೋಜನೆಯಡಿ 1026.00 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಗಾಗಿ 15 ಲಕ್ಷ, ಇಂದಿರಾ ಕ್ಯಾಂಟಿನ್ ಅನುದಾನ 20.00 ಲಕ್ಷ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 3275.00 ಲಕ್ಷ ಸೇರಿದಂತೆ ಒಟ್ಟು 5697.89 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಇವುಗಳಿಂದ ಪಡೆದ ಅನುದಾನದಲ್ಲಿ ರಸ್ತೆಗಳು, ರಸ್ತೆ ಬದಿ ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ 754.93 ಲಕ್ಷ ರು. ಮೀಸಲಿರಿಸಲಾಗಿದೆ. ಪ್ರತಿ ವಾರ್ಡನಲ್ಲಿ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕುಡಿಯುವ ನೀರಿನ ನಿರ್ವಹಣೆಗಾಗಿ 575.28 ಲಕ್ಷ, ಬೀದಿ ದೀಪಗಳನ್ನು ಕಲ್ಪಿಸಲು ಹಾಗೂ ನಿರ್ವಹಣೆಗಾಗಿ 255.00 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ/ದುರಸ್ತಿಗೆ 35.25 ಲಕ್ಷ ಹಾಗೂ ಹಾಲಿಯಿರುವ ಸಾರ್ವಜನಿಕ ಶೌಚಾಯಗಳ ದುರಸ್ತಿಗಾಗಿ 5.00 ಲಕ್ಷ ಮೀಸಲಿರಿಸಲಾಗಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಲ್ಯಾಂಡ್‌ಫೀಲ್ ಸೈಟ್ ಅಭಿವೃದ್ಧಿಗೆ 308.00 ಲಕ್ಷ, ಯುಜಿಡಿ ಕಾಮಗಾರಿಗಳಿಗಾಗಿ 35.50 ಲಕ್ಷ ಹಾಗೂ ಹಾಲಿಯಿರುವ ಯುಜಿಡಿಗಳ ದುರಸ್ತಿಗಾಗಿ 20.00 ಲಕ್ಷ, ನಗರದ ಪ್ರಮುಖ ಸರ್ಕಲ್‌ಗಳ ಅಭಿವೃದ್ಧಿಗೆ 50.00 ಲಕ್ಷ, ಮಹಿಳೆಯರಿಗಾಗಿ ಪಿಂಕ್ ಪಾರ್ಕ್ ನಿರ್ಮಿಸಲು 50.00 ಲಕ್ಷ ಸೇರಿದಂತೆ ನಗರದ ಉದ್ಯಾನಗಳ ಸಮಗ್ರ ಅಭಿವೃದ್ಧಿಗಾಗಿ ನಗರಸಭಾ ನಿಧಿ ಹಾಗೂ ನಗರಸಭಾ ಮಳಿಗೆ ಬಾಡಿಗೆಯಲ್ಲಿ ಒಟ್ಟು 461.50 ಲಕ್ಷ ಮೀಸಲಿರಿಸಲಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ 100.00 ಲಕ್ಷ, ಬಸ್ ತಂಗುದಾಣಗಳ ನಿರ್ಮಾಣಕ್ಕೆ 20.00 ಲಕ್ಷ, ನಗರಸಭಾ ಹೈಸ್ಕೂಲ್ ಅಭಿವೃದ್ಧಿ ಹಾಗೂ ಪೀಠೋಪಕರಣಗಳ ಖರೀದಿಗೆ 70.00 ಲಕ್ಷ ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡಲು 9.00 ಲಕ್ಷ, ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 1.00 ಲಕ್ಷ ಮೀಸಲಿಡುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಗುರಿಯನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ ಎಂದರು.ಬಜೆಟ್ ಮಂಡನೆ ನಂತರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ಮಾಜಿ ಸದಸ್ಯರು ಬಜೆಟ್ ಕುರಿತು ಮಾತನಾಡಿ ಕೆಲವೊಂದು ಸಲಹೆಗಳನ್ನು ನೀಡಿದರು. ಪೌರಾಯುಕ್ತ ಎಫ್.ಐ.ಇಂಗಳಗಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಮರಿಗೌಡ್ರ, ಲೆಕ್ಕ ಅಧೀಕ್ಷಕಿ ವಾಣಿಶ್ರೀ ಉಪಸ್ಥಿತರಿದ್ದರು.