ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ: ಶಾಸಕ ಕಂದಕೂರ

| Published : Feb 19 2025, 12:48 AM IST

ಸಾರಾಂಶ

Maintain quality in works: MLA Kandakura

-ಯಡ್ಡಳ್ಳಿ ಗ್ರಾಮದಲ್ಲಿ 6 ಕೋಟಿ ರು.ಗಳ ವೆಚ್ಚದಲ್ಲಿ ಯಡ್ಡಳ್ಳಿ-ಚಾಮನಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರು ಚಾಲನೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಕಾಮಗಾರಿ ಗುಣಮಟ್ಟ ಮಾಡಿಕೊಂಡು, ತ್ವರಿತಗತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಜನರಿಗೆ ಅದರ ಲಾಭವಾಗಲಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದರು.

ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯಡಿಯಲ್ಲಿ 6 ಕೋಟಿ ರು. ವೆಚ್ಚದಲ್ಲಿ ಯಡ್ಡಳ್ಳಿ-ಚಾಮನಳ್ಳಿ ರಸ್ತೆ ಡಾಂಬರೀಕರಣ ಹಾಗೂ 30 ಲಕ್ಷ ರು.ಗಳ ವೆಚ್ಚದ ಚಾಮನಳ್ಳಿ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ ತಾಂಡಾ ಗ್ರಾಮಗಳಲ್ಲಿನ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಯಡ್ಡಳ್ಳಿ ವಾಲ್ಮೀಕಿ ನಾಯಕ ಸಮಾಜದ ಬಹುದಿನದ ಬೇಡಿಕೆಯಾದ ವಾಲ್ಮೀಕಿ ಭವನ ನಿರ್ಮಾಣ ಖಂಡಿತ ಮಾಡಿಕೊಡುವುದಾಗಿ ಭರವಸೆ ನೀಡಿದ ಶಾಸಕ ಕಂದಕೂರ, ಯಡ್ಡಳ್ಳಿ ಗ್ರಾಮದ ಕಾಳಿಕಾದೇವಿ ದೇವಸ್ಥಾನ ಅಭಿವೃದ್ಧಿಗೆ ಈಗಲೇ 5 ಲಕ್ಷ ರು.ಗಳ ಅನುದಾನ ಕೊಡುವುದಾಗಿ, ನಂತರ ಇನ್ನೂ ಬೇಕಿರುವ ಅನುದಾನ ಕೊಟ್ಟು ದೇವಸ್ಥಾನ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.

ಮನೆಗಳನ್ನು ನೀಡುವಾಗ ರಾಜಕೀಯ ಮಾಡಲಾಗುತ್ತಿದೆ, ಮನೆ ಕೊಟ್ಟವರಿಗೆ ಮತ್ತೇ ಹಣ ತೆಗೆದುಕೊಂಡು ಮನೆಗಳ ಕೊಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಗ್ರಾಮ ಪಂಚಾಯಿತಿ ಮನೆ ನೀಡುವಾಗ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಮನೆಗಳನ್ನು ಅರ್ಹರಿಗೆ ನೀಡಿ, ಬಡವರಿಗೆ ಮನೆ ನೀಡುವುದರಿಂದ ನಿಮಗೆ ಶ್ರೇಯಸ್ಸು ಸಿಗಲಿದೆ ಎಲ್ಲದರಲ್ಲಿಯೂ ಹಣದ ವ್ಯವಹಾರ ಮಾಡಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಬೇಡಿ ಎಂದು ತಾಕೀತು ಮಾಡಿದರು.

ಯಡ್ಡಳ್ಳಿ ಗ್ರಾಮಸ್ಥರು ನೀಡಿದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯಯನ್ವಯ ಹಂತ ಹಂತವಾಗಿ ಒಂದೊಂದು ಅಭಿವೃದ್ಧಿ ಕಾರ್ಯ ಮಾಡುತ್ತೇನೆಂದ ಅವರು, ಮಸೀದಿ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೀರಿ, ವಕ್ಫ್ ಬೋರ್ಡ್ ನಲ್ಲಿ ಆ ಮಸೀದಿ ನೋಂದಣಿ ಇದ್ದರೆ ಅಭಿವೃದ್ಧಿಗೆ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಯೋಜನೆಗಳ ಸದುಪಯೋಗವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಮಾಡಬೇಕು ಎಂದರು.

ರಸ್ತೆ ಮತ್ತು ಚರಂಡಿಗಳಂತಹ ಮೂಲ ಸೌಲಭ್ಯಗಳಿಗೆ ಅಭಿವೃದ್ಧಿ ಸೇರಿದಂತೆ ಅಂಗನವಾಡಿ ಹಾಗೂ ಶಾಲೆ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ, ನಾನು ಕೇವಲ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುತ್ತಿಲ್ಲ. ಬದಲಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನನ್ನ ಜೊತೆಗೆ ಕರೆದುಕೊಂಡು ಬರುತ್ತಿದ್ದು ಜನ ಸಮಸ್ಯೆಗೆ ನೇರವಾಗಿ ಸ್ಪಂದಿಸಲಾಗತ್ತಿದೆ ಎಂದರು.

ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ಮೂಲಸೌಕರ್ಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದ ಪ್ರಯುಕ್ತ ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಸೂಚಿಸಿ, ನಿಮ್ಮ ಗ್ರಾ.ಪಂ ಅನುದಾನದಲ್ಲಿ ಆದಷ್ಟು ಅನುದಾನ ನೀಡಿ ಕಂಪೌಂಡ್ ಇನ್ನಿತರ ಕಾರ್ಯ ಮಾಡಿಸಿಕೊಡಿ. ಒಂದು ವೇಳೆ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ತಿಳಿಸಿ ಶಾಸಕರ ಅನುದಾನದಲ್ಲಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕೋಟಗೇರಾ, ಭೋಜನಗೌಡ ಯಡ್ಡಳ್ಳಿ, ಮಲ್ಲಣ್ಣಗೌಡ ಹತ್ತಿಕುಣಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ ರಾಠೋಡ, ಗಿರಿನಾಥರಡ್ಡಿ ಚಿಂತಗುಂಟಾ, ಈಶಪ್ಪ ರ‍್ಯಾಕಾ, ಸಣ್ಣೆಪ್ಪ ಕೋಟಗೇರಾ, ಬಸಣ್ಣಗೌಡ ಚಾಮನಳ್ಳಿ, ಅಮರೇಶಗೌಡ ಬಂದಳ್ಳಿ, ನರಸಪ್ಪ ಕವಡೆ, ಭೀಮರಾಯ ಬದ್ದೇಪಲ್ಲಿ, ತಾಯಪ್ಪ ಬದ್ದೇಪಲ್ಲಿ, ಮರೆಪ್ಪ ನಾಟೇಕಾರ ಕಿಲ್ಲನಕೇರಾ ಸೇರಿದಂತೆ ಇತರರಿದ್ದರು.

----ಫೋಟೊ:

18ವೈಡಿಆರ್14: ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ 6 ಕೋಟಿ ರು.ಗಳ ವೆಚ್ಚದಲ್ಲಿ ಯಡ್ಡಳ್ಳಿ-ಚಾಮನಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರು ಅವರು ಚಾಲನೆ ನೀಡಿದರು.