ಹುಬ್ಬಳ್ಳಿ:
ಹುಬ್ಬಳ್ಳಿ ಗ್ರಾಮೀಣ ಡಿವೈಎಸ್ಪಿ ಕಚೇರಿ ತೆರೆಯಲು ಸರ್ಕಾರ ಅಸ್ತು ಎಂದಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರಳುವ ಮುನ್ನ ಧಾರವಾಡ ಜಿಲ್ಲೆಗೆ ಸಿಹಿ ಸುದ್ದಿ ನೀಡಿದೆ.ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಪೊಲೀಸ್ ಉಪವಿಭಾಗವಿತ್ತು. ಕಾರ್ಯ ಒತ್ತಡ ಹೆಚ್ಚುತ್ತಿದ್ದರಿಂದ ಈ ಭಾಗದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಗುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 10 ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಕಳಸಾ-ಬಂಡೂರಿ ರೈತ ಸತ್ಯಾಗ್ರಹಗಳು, ಕಾರ್ಮಿಕ, ವಿದ್ಯಾರ್ಥಿಗಳ ಚಳವಳಿ, ಗಂಭೀರ ಅಪರಾಧ, ಗಂಭೀರವಲ್ಲದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಡಿವೈಎಸ್ಪಿ ದರ್ಜೆಯ ಅಧಿಕಾರಿಯೊಬ್ಬರೇ 10 ಠಾಣೆಗಳನ್ನು ನಿಭಾಯಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಧಾರವಾಡ ಗ್ರಾಮೀಣ ಉಪವಿಭಾಗವನ್ನಾಗಿ ವಿಂಗಡಿಸಿ ಹುಬ್ಬಳ್ಳಿ ಗ್ರಾಮೀಣ ಉಪವಿಭಾಗವನ್ನು ಹೊಸದಾಗಿ ಸೃಷ್ಟಿಸುವುದು ಅಗತ್ಯವಿದೆ ಎಂದು ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಿದ್ದರು. ಅದಕ್ಕೆ ತಕ್ಕಂತೆ ಸಾರ್ವಜನಿಕರು ಬಹುದಿನದಿಂದ ಆಗ್ರಹಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹುಬ್ಬಳ್ಳಿ ಗ್ರಾಮೀಣ ಉಪವಿಭಾಗವನ್ನು ವಿಂಗಡಿಸಿ ಆದೇಶಿಸಿದೆ. ಹೊಸದಾಗಿ ಡಿವೈಎಸ್ಪಿ ಕಚೇರಿ ಆರಂಭಿಸಲು ಮೇ 26ರಂದು ಸರ್ಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಗ್ರಾಮೀಣ ಉಪವಿಭಾಗದಡಿಯಲ್ಲಿ ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ, ಗುಡಗೇರಿ, ನವಲಗುಂದ ಹಾಗೂ ಅಣ್ಣಿಗೇರಿ ಠಾಣೆಗಳು ಬರಲಿವೆ. ಹುಬ್ಬಳ್ಳಿ ಗ್ರಾಮೀಣ ಉಪವಿಭಾಗ ಕಚೇರಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಸ್ಥಾಪಿಸಲು ಸರ್ಕಾರ ಆದೇಶಿಸಿದೆ. ಜತೆಗೆ ಉಪವಿಭಾಗಕ್ಕೆ ಡಿವೈಎಸ್ಪಿ ಹುದ್ದೆ ಮಂಜೂರು ಮಾಡುವುದರ ಜತೆಗೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಉಪವಿಭಾಗಕ್ಕೆ ಅಸ್ತು ಎಂದಿದೆ.ಉಪವಿಭಾಗ ಕಚೇರಿಗೆ ಅಗತ್ಯವಿರುವ ಪೂರಕ ಸಿಬ್ಬಂದಿಗಳನ್ನು ಗುಡಗೇರಿ ಠಾಣೆಯಿಂದ ಎಎಸ್‌ಐ ಒಬ್ಬರನ್ನು ಮರುಹಂಚಿಕೆ ಮಾಡಲಾಗುತ್ತಿದೆ. ಇನ್ನುಳಿದ ಅಣ್ಣಿಗೇರಿ ಹಾಗೂ ಅಳ್ನಾವರ ಠಾಣೆಯಿಂದ ತಲಾ ಒಂದರಂತೆ ಇಬ್ಬರು ಸಿಎಚ್‌ಸಿ, ಕುಂದಗೋಳ ಹಾಗೂ ಮಹಿಳಾ ಪೊಲೀಸ್ ಠಾಣೆಯಿಂದ ತಲಾ ಒಂದರಂತೆ ಇಬ್ಬರು ಸಿಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಎರಡು ದಿನ ಮೊದಲಷ್ಟೇ ಅವರ ಸರ್ಕಾರ ಜಿಲ್ಲೆಗೆ ಉಪವಿಭಾಗ ನೀಡುವ ಮೂಲಕ ಸಿಹಿ ಸುದ್ದಿ ನೀಡಿದಂತಾಗಿದೆ.
ಸರ್ಕಾರಕ್ಕೆ ಧನ್ಯವಾದ:
ಈ ಕುರಿತಂತೆ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಹುಬ್ಬಳ್ಳಿ ಗ್ರಾಮೀಣ ಉಪವಿಭಾಗ ಅತ್ಯಗತ್ಯವಿತ್ತು. ಈ ನಿಟ್ಟಿನಲ್ಲಿ ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದೇವು. ಸರ್ಕಾರ ಮೇ 26ರಂದು ಹುಬ್ಬಳ್ಳಿ ಗ್ರಾಮೀಣ ಉಪವಿಭಾಗಕ್ಕೆ ಅಸ್ತು ಎಂದು ಆದೇಶಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.