ಹುಬ್ಬಳ್ಳಿ:

ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರದಲ್ಲಿ ಮುಸಲ್ಮಾನ ಬಾಂಧವರು ಗುರುವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಇಲ್ಲಿನ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಅಬಾಲವೃದ್ಧರಾಗಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇಲ್ಲಿಯ ಮೂರುಸಾವಿರ ಮಠಕ್ಕೆ ತೆರಳಿ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಆಶೀರ್ವಾದ ಪಡೆದರು. ಮುಸ್ಲಿಂ ಧರ್ಮಗುರು, ಫತೇಶಾವಲಿ ದರ್ಗಾ ಮಸೀದಿಯ ಮುಫ್ತಿ ಮೌಲಾನಾ ಅಬ್ದುಲ್ ಸುಭಾನ್ ಪ್ರವಚನ ನೀಡಿ, ತ್ಯಾಗ, ಬಲಿದಾನ ನೆನಪಿಸುವ ಹಬ್ಬವೇ ಬಕ್ರೀದ್. ಪ್ರತಿಯೊಬ್ಬರು ಈ ಹಬ್ಬದ ಮಹತ್ವ ಅರಿತು ಸಹಬಾಳ್ವೆಯಿಂದ ಬಾಳುವಂತೆ ಕರೆ ನೀಡಿದರು.

ಮಾನವ ಧರ್ಮ ಶ್ರೇಷ್ಠವಾದದ್ದು, ಪ್ರತಿಯೊಬ್ಬರು ಮಾನವೀಯ ಮೌಲ್ಯ ಬೆಳೆಸಿಕೊಂಡು ಸಹಬಾಳ್ವೆಯಿಂದ ಬದುಕುವಂತಾಗಬೇಕು. ಹಲವು ವರ್ಷಗಳಿಂದ ಮುಸಲ್ಮಾನರ ಮೇಲೆ ನಿರಂತರವಾಗಿ‌ ದೌರ್ಜನ್ಯ ನಡೆಯುತ್ತಿದೆ. ಅದು ಇಂದಿಗೂ ಮುಂದುವರಿದಿದೆ. ಈ ಕುರಿತು ಸಮಾಜ ಬಾಂಧವರು ಜಾಗೃತರಾಗಬೇಕಿದೆ ಎಂದರು.

ಅದರಂತೆ ಹಳೇಹುಬ್ಬಳ್ಳಿ, ನೇಕಾರನಗರ, ಬಂಕಾಪೂರಚೌಕ್, ಗೋಪನಕೊಪ್ಪ, ಅಮರಗೋಳ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬ್ರಕೀದ್ ಹಬ್ಬದ ಅಂಗವಾಗಿ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.


ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಸಚಿವ, ಅಂಜುಮನ್ ಏ ಇಸ್ಲಾಂ ಅಧ್ಯಕ್ಷ ಎ.ಎಂ.‌ ಹಿಂಡಸಗೇರಿ, ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಪಾಲಿಕೆ ಸದಸ್ಯ ಇಲಿಯಾಸ್‌ ಮನಿಯಾರ್‌, ದಾದಾಹಯಾತ ಖೈರಾತಿ, ಅಬ್ದುಲ್ ಬಸೀರ ಹಳ್ಳೂರ, ಸಿರಾಜ ಅಹ್ಮದ್‌ ಕುಡಚಿವಾಲೆ, ವಹಾಬ್ ಮುಲ್ಲಾ, ಯೂಸೂಫ್‌ ಸವಣೂರ, ಬಾಬಾ ಧಾರವಾಡ, ರಫೀಕ್‌ ಬಂಕಾಪುರ, ಇರ್ಷಾದ ಬಳ್ಳಾರಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.

ಕೋಟ್‌..ಎಲ್ಲರೂ ಒಗ್ಗಟ್ಟಿನಿಂದ ಬರುವ ಎಲ್ಲ ಸಮಸ್ಯೆ ಎದುರಿಸಬೇಕು. ಇದೀಗ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದ್ದು ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಲು ಎಲ್ಲ ಮಸೀದಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು.

ಎ.ಎಂ.‌ ಹಿಂಡಸಗೇರಿ ಮಾಜಿ ಸಚಿವ