ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯ ಅಬ್ಬರದಿಂದ ವ್ಯಾಪಕ ಹಾನಿ ಸಂಭವಿಸಿದ್ದು, ಜಿಲ್ಲಾಡಳಿತದ ಪ್ರಾಥಮಿಕ ಅಂದಾಜು ಪ್ರಕಾರ ಒಟ್ಟು ₹90.59 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ವ್ಯಕ್ತಿ, ಜಾನುವಾರುಗಳ ಸಾವು, ಮನೆಗಳಿಗೆ ಹಾನಿ, ವಿದ್ಯುತ್ ಮೂಲ ಸೌಕರ್ಯ ಧ್ವಂಸ, ಶಾಲೆಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ.ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಗದಗ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಅಲ್ಲದೆ 31 ಜಾನುವಾರುಗಳು ಮೃತಪಟ್ಟಿದ್ದು, ಅದರಲ್ಲಿ ಒಂದು ದೊಡ್ಡ ಜಾನುವಾರು ಹಾಗೂ 30 ಸಣ್ಣ ಜಾನುವಾರುಗಳು ಸೇರಿವೆ. ಶಿರಹಟ್ಟಿ ತಾಲೂಕಿನಲ್ಲಿ 100 ಕೋಳಿಗಳು ಸಾವಿಗೀಡಾಗಿವೆ.
14 ಮನೆಗಳಿಗೆ ಹಾನಿ: ಮಳೆಯಿಂದ ಮನೆಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಜಿಲ್ಲಾದ್ಯಂತ 14 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಗದುಗಿನಲ್ಲಿ 2, ಶಿರಹಟ್ಟಿಯಲ್ಲಿ 5 ಹಾಗೂ ರೋಣದಲ್ಲಿ 7 ಮನೆಗಳಿಗೆ ಹಾನಿಯಾಗಿದೆ. ಇದೇ ವೇಳೆ 161 ಗುಡಿಸಲುಗಳು ಮತ್ತು ಶೆಡ್‌ಗಳು ಸಂಪೂರ್ಣ ನೆಲಕಚ್ಚಿದ್ದು, ಗದುಗಿನಲ್ಲೇ 133 ಪ್ರಕರಣಗಳು ದಾಖಲಾಗಿವೆ.ಲಕ್ಷ್ಮೇಶ್ವರದಲ್ಲಿ 14, ಮುಂಡರಗಿಯಲ್ಲಿ 5 ಹಾಗೂ ರೋಣದಲ್ಲಿ 9 ಶೆಡ್‌ಗಳು ಹಾನಿಗೊಳಗಾಗಿವೆ. 11 ಜಾನುವಾರು ಶೆಡ್‌ಗಳು ಕುಸಿದಿದ್ದು, ಗದುಗಿನಲ್ಲಿ 7 ಹಾಗೂ ಶಿರಹಟ್ಟಿಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಮಳೆಯಿಂದ ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ 96 ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎನ್ನುತ್ತಿದೆ ಜಿಲ್ಲಾಡಳಿತ ಮೂಲಗಳು.
567 ವಿದ್ಯುತ್ ಕಂಬಗಳು ನೆಲಕ್ಕೆ: ಮಳೆಯಿಂದ ವಿದ್ಯುತ್ ವ್ಯವಸ್ಥೆಗೂ ಭಾರೀ ಹೊಡೆತ ಬಿದ್ದಿದೆ. ಜಿಲ್ಲಾದ್ಯಂತ 567 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಗದುಗಿನಲ್ಲಿ ಅತಿ ಹೆಚ್ಚು 258, ಗಜೇಂದ್ರಗಡದಲ್ಲಿ 16, ಲಕ್ಷ್ಮೇಶ್ವರದಲ್ಲಿ 63, ಮುಂಡರಗಿಯಲ್ಲಿ 53, ನರಗುಂದದಲ್ಲಿ 62, ರೋಣದಲ್ಲಿ 98 ಹಾಗೂ ಶಿರಹಟ್ಟಿಯಲ್ಲಿ 17 ಕಂಬಗಳು ಹಾನಿಗೊಳಗಾಗಿವೆ. ಐದು ವಿದ್ಯುತ್ ಪರಿವರ್ತಕಗಳಿಗೂ ಹಾನಿಯಾಗಿದ್ದು, ಇವುಗಳೆಲ್ಲವೂ ಗದಗ ತಾಲೂಕಿನಲ್ಲೇ ಸಂಭವಿಸಿವೆ.
ಶಾಲೆಗಳಿಗೂ ಹಾನಿ: ಮುಂಗಾರು ಪೂರ್ವ ಮಳೆಯು ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ತೀವ್ರ ಹೊಡೆತ ನೀಡಿದ್ದು, ಜಿಲ್ಲೆಯ 10 ಶಾಲೆಗಳಿಗೆ ಹಾನಿಯಾಗಿವೆ. ಗದುಗಿನಲ್ಲಿ 4 ಹಾಗೂ ರೋಣದಲ್ಲಿ 6 ಶಾಲೆಗಳಿಗೆ ಹಾನಿಯಾಗಿದೆ. ಆದರೆ ಅಂಗನವಾಡಿ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ. ಇನ್ನೇನು ನಾಲ್ಕೈದು ದಿನಗಳಲ್ಲಿ ಶಾಲೆಗಳು ಪ್ರಾರಂಭವಾಗಲಿದ್ದು, ಈ ವೇಳೆಯಲ್ಲಿ ಶಾಲೆಗಳಿಗೆ ಹಾನಿಯಾಗಿ ಇದುವರೆಗೂ ದುರಸ್ತಿ ಮಾಡದೇ ಇರುವುದರ ಬಗ್ಗೆ ಗದಗ ತಾಲೂಕಿನ ಹಲವಾರು ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ತೋಟಗಾರಿಕಾ ಬೆಳೆಗಾರರಿಗೆ ಸಂಕಷ್ಟ: ಮಳೆಗಾಳಿಯಿಂದ ಅತಿ ಹೆಚ್ಚು ಹಾನಿ ಮಾಡಿರುವುದು ತೋಟಗಾರಿಕಾ ಬೆಳೆಗಳಿಗೆ. ಒಟ್ಟು 34.58 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ಗದುಗಿನಲ್ಲಿ 17.30 ಹೆಕ್ಟೇರ್, ಲಕ್ಷ್ಮೇಶ್ವರದಲ್ಲಿ 4.18 ಹೆಕ್ಟೇರ್, ಮುಂಡರಗಿಯಲ್ಲಿ 3.60 ಹೆಕ್ಟೇರ್ ಹಾಗೂ ಶಿರಹಟ್ಟಿಯಲ್ಲಿ 9.50 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮುಂಗಾರು ಪೂರ್ವ ಮಳೆ ಎಂದರೆ ರೈತರ ಜಮೀನುಗಳಲ್ಲಿ ಯಾವುದೇ ಬೆಳೆ ಇರುವುದಿಲ್ಲ. ಹಾಗಾಗಿ ಪರಿಹಾರ ಕೊಡಲು ಬರುವುದಿಲ್ಲ ಎನ್ನುವ ಸರ್ಕಾರ ನಿಯಮವೀಗ ಜಿಲ್ಲೆಯ ತೋಟಗಾರಿಕಾ ಬೆಳೆದ ರೈತರಿಗೆ ದೊಡ್ಡ ಸಂಕಷ್ಟವನ್ನು ಸೃಷ್ಟಿ ಮಾಡಿದೆ.
ತುರ್ತು ಪರಿಹಾರ: ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಎಲ್ಲ ಹಾನಿಗೆ ಒಟ್ಟು ₹90.59 ಲಕ್ಷ ಅಂದಾಜು ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಳೆ ಹಾಗೂ ಗಾಳಿಯ ಅಬ್ಬರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ತಿಳಿಸಿದರು.ವ್ಯಾಪಕ ಹಾನಿ: ಜಿಲ್ಲಾದ್ಯಂತ ತೋಟಗಾರಿಕಾ ಬೆಳೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಅದರಲ್ಲಿಯೂ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಬೆಳೆಗಳು ಗಾಳಿ ಮತ್ತು ಮಳೆಯ ಅಬ್ಬರಕ್ಕೆ ಸಂಪೂರ್ಣ ನೆಲಕಚ್ಚಿವೆ. ಜಿಲ್ಲಾಡಳಿತ ಕೂಡಲೇ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಕಳಸಾಪುರ ಗ್ರಾಮದ ರೈತ ನಜೀರ್ ಅಹ್ಮದ ಪೆಂಡಾರಿ ತಿಳಿಸಿದರು.