ನಗರದಲ್ಲಿ ಪೂರ್ವ ಮುಂಗಾರು ಅಬ್ಬರ ಮುಂದುವರೆದಿದ್ದು, ಶುಕ್ರವಾರ ಸಂಜೆ ನಗರದಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪೂರ್ವ ಮುಂಗಾರು ಅಬ್ಬರ ಮುಂದುವರೆದಿದ್ದು, ಶುಕ್ರವಾರ ಸಂಜೆ ನಗರದಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶಗಳು, ರಸ್ತೆಗಳು, ಅಂಡರ್‌ಪಾಸ್‌ಗಳು, ಫ್ಲೈಓವರ್‌ಗಳು, ಮೆಟ್ರೋ ನಿಲ್ದಾಣಗಳ ಕೆಳ ಭಾಗ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ನೀರು ರಭಸವಾಗಿ ಹರಿದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿಧಾನಗೊಂಡಿತ್ತು. ಶಿವಾನಂದ ಸರ್ಕಲ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಕಾರೊಂದು ನೀರಿನಲ್ಲಿ ಸಿಲುಕಿತ್ತು. ಗುಟ್ಟಹಳ್ಳಿ ಮ್ಯಾಜಿಕ್ ಬಾಕ್ಸ್, ಮೇಕ್ರಿ ಸರ್ಕಲ್ ಅಂಡರ್‌ಪಾಸ್‌ ಕೂಡ ಜಲಾವೃತಗೊಂಡ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಎಂ.ಜಿ ರಸ್ತೆ, ಕೆ.ಆರ್. ಸರ್ಕಲ್, ಮಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಕೆ.ಆರ್. ಮಾರ್ಕೆಟ್, ರಿಚ್‌ಮಂಡ್ ಸರ್ಕಲ್, ಜಯನಗರ, ಮಲ್ಲೇಶ್ವರಂ, ಹೆಬ್ಬಾಳ, ಆರ್.ಟಿ. ನಗರ, ಯಶವಂತಪುರ, ರಾಜಾಜಿನಗರ, ವಿಜಯನಗರ, ಕೋರಮಂಗಲ, ಬನಶಂಕರಿಯಲ್ಲಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು.

ಬಿದ್ದ ಮರಗಳು: ಭಾರೀ ಮಳೆಗೆ ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಸಂಚಾರ ಪೊಲೀಸ್ ಸಿಬ್ಬಂದಿ ಮರದ ಕೊಂಬೆಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹಲವೆಡೆ ಟ್ರಾಫಿಕ್‌ ಜಾಮ್‌: ಯು.ಬಿ ಸಿಟಿಯಿಂದ ಕಾಫಿ ಡೇ ರಸ್ತೆ, ಕಾಫಿ ಡೇ ಜಂಕ್ಷನ್‌ನಿಂದ ಸಿದ್ದಲಿಂಗಯ್ಯ ಜಂಕ್ಷನ್, ಶಿವಾನಂದ ರೈಲ್ವೆ ಅಂಡರ್‌ಪಾಸ್, ಗವಿಪುರ ರಸ್ತೆ, ಸಾರಕ್ಕಿ, ಪಟ್ಟಂದೂರು ಅಗ್ರಹಾರದಿಂದ ಇಸಿಸಿ ರಸ್ತೆ, ದೇವಾಂಗ ಜಂಕ್ಷನ್‌ನಿಂದ ಮಿಷನ್ ರಸ್ತೆ ಕಡೆಗೆ ತೆರಳುವ ಮಾರ್ಗದಲ್ಲಿ ನೀರು ನಿಂತು ವಾಹನಗಳ ಸಂಚಾರ ನಿಧಾನವಾಗಿತ್ತು.

ಜೂ.2ರವರೆಗೂ ನಗರದಲ್ಲಿ

ಭಾರಿ ಮಳೆ ಮುಂದುವರಿಕೆ

ನಗರದಲ್ಲಿ ಶುಕ್ರವಾರ ಸರಾಸರಿ 20 ಮಿ.ಮೀ ಮಳೆಯಾಗಿದ್ದು, ಜೂನ್.2ರ ವರೆಗೆ ಗುಡುಗು, ಮಿಂಚು ಸಹಿತ ನಗರದಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಟೋ ನಿಲ್ಲಿಸಿ ವಿಶ್ರಾಂತಿ ಪಡೆಯುವಾಗಗೋಡೆ ಕುಸಿದು ಚಾಲಕ ದಾರುಣ ಸಾವು ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ ಮುಸ್ಸಂಜೆ ಹೊತ್ತಲ್ಲಿ ವರುಣ ಅರ್ಭಟಕ್ಕೆ ಆಟೋ ಚಾಲಕರೊಬ್ಬರು ಪ್ರಾಣ ತೆತ್ತಿದ್ದಾರೆ. ಗಂಗೊಂಡನಹಳ್ಳಿ ನಿವಾಸಿ ಶಿವಬೋರಯ್ಯ (52) ಮೃತ ದುರ್ದೈವಿ. ವಿಜಯನಗರದ ಕ್ಲಬ್‌ನ ಪಕ್ಕದಲ್ಲಿ ಆಟೋ ನಿಲ್ಲಿಸಿಕೊಂಡು ಅವರು ಕುಳಿತಿದ್ದರು. ಆಗ ಮಳೆಗೆ ಕ್ಲಬ್‌ ಗೋಡೆ ಆಟೋ ಮೇಲೆ ಕುಸಿದ ಪರಿಣಾಮ ಆಟೋದೊಳಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಕುಟುಂಬದ ಜತೆ ನೆಲೆಸಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವಬೊರಯ್ಯ ಅವರು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಶುಕ್ರವಾರ ಸಹ ಅವರು ಆಟೋ ಓಡಿಸುತ್ತಿದ್ದರು. ಸಂಜೆ ಮಳೆ ಆರಂಭವಾದಾಗ ವಿಜಯನಗರ ಕ್ಲಬ್‌ನ ಗೋಡೆ ಸಮೀಪ ಆಟೋ ನಿಲ್ಲಿಸಿ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಸುರಿದ ಭಾರಿ ಮಳೆಗೆ ಆಟೋ ಮೇಲೆ ದಿಢೀರನೇ ಕ್ಲಬ್ ಗೋಡೆ ಕುಸಿದಿದೆ. ಆಗ ವೇಳೆ ಆಟೋದಲ್ಲಿದ್ದ ಶಿವಬೊರಯ್ಯ ಹೊರ ಬರಲಾಗದೆ ಮಣ್ಣಿನ ಅಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮಣ್ಣಿನಡಿ ಸಿಲುಕಿದ್ದ ಆಟೋದಿಂದ ಶಿವಬೋರಯ್ಯ ಅವರ ಮೃತದೇಹವನ್ನು ಹೊರ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಸಂಬಂಧ ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.