ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾನೂನುಬದ್ಧ ಸೌಲಭ್ಯ ಕಲ್ಪಿಸದೇ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಆಡಳಿತ ಮಂಡಳಿ ವರ್ತನೆ ಖಂಡಿಸಿ ಇಂಡಸ್ ಟವರ್ಸ್ ತಾಂತ್ರಿಕರು ಮತ್ತು ಭಾರತೀಯ ಟೆಲಿಕಾಂ ಮಜ್ದೂರು ಸಂಘ (ಬಿಪಿಟಿಎಂಎಸ್) ನೇತೃತ್ವದಲ್ಲಿ ನಗರದಲ್ಲಿ ಟವರ್ ಕಾರ್ಮಿಕರು ಪ್ರತಿಭಟಿಸಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬುಧವಾರ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಕಂಪನಿ ಆಡಳಿತ ಮಂಡಳಿಯಿಂದ ಆಗುತ್ತಿರುವ ಶೋಷಣೆ, ಅನ್ಯಾಯವನ್ನು ತಪ್ಪಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇಂಡಸ್ ಟವರ್ಸ್ ಗುತ್ತಿಗೆಯನ್ನು ಹೊಸದಾಗಿ ಪಡೆದವರು ಏಕಾಏಕಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ಇಂತಹ ಕ್ರಮದಿಂದಾಗಿ ಕಾರ್ಮಿಕರು ಮತ್ತು ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಕೆಲಸದಿಂದ ತೆಗೆದು ಹಾಕಿರುವ ಎಲ್ಲಾ ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕೆಲಸದಿಂದ ವಂಚಿತರಾದ ಎಲ್ಲರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಂಡು, ನ್ಯಾಯ ಒದಗಿಸಬೇಕು. ಕೆಲಸಗಾರರಿಗೆ ಕಾನೂನುಬದ್ಧ ಸೌಲಭ್ಯಗಳಾದ ವಾರದ ವಿಶ್ರಾಂತಿ ದಿನ, ರಾಷ್ಟ್ರೀಯ ಮತ್ತು ಹಬ್ಬದ ರಜೆ, ದಿನಕ್ಕೆ 8 ಗಂಟೆಗಳ ಕರ್ತವ್ಯಮಿತಿ ಹಾಗೂ ಹೆಚ್ಚುವರಿ ಕೆಲಸಕ್ಕೆ ನ್ಯಾಯಸಮ್ಮತ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರು ಯಾವುದೇ ಯೂನಿಯನ್ ಚಟುವಟಿಕೆಗಳಲ್ಲಿ ಭಾಗವಹಿಸಿದರೆಂಬ ಕಾರಣಕ್ಕಾಗಿ ಅಂತಹ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಬಾರದು. ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಬೇಕು. ಯೂನಿಯನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕಾನೂನು ಬದ್ಧವಾಗಿಯೇ ಅವಕಾಶ ಮಾಡಿಕೊಡಬೇಕು. ಕಾರ್ಮಿಕರು ಒತ್ತಾಯಿಸುತ್ತಿರುವ ನ್ಯಾಯಯುವತವಾದ ವೇತನ ಪರಿಷ್ಕರಣೆ ಮತ್ತು ಎಲ್ಲರಿಗೂ ಸಮಾನ ವೇತನದ ವ್ಯವಸ್ಥೆ ಕೂಡಲೇ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.ಕಾರ್ಮಿಕರು ತಮ್ಮ ಹಕ್ಕುಗಳ ಮರುಸ್ಥಾಪನೆ ಮತ್ತು ನ್ಯಾಯಯುತ ಕಾರ್ಮಿಕ ವ್ಯವಸ್ಥೆ ಜಾರಿಗೆ ತರಬೇಕು. ಎಲ್ಲಾ ಕಾರ್ಮಿಕರಿಗೆ ವೈದ್ಯಕೀಯ ಮತ್ತು ಅಪಘಾತ ವಿಮೆ ನೀಡಬೇಕು. ಕರ್ತವ್ಯ ದ ವೇಳೆ ಸಾವನ್ನಪ್ಪಿದರೆ ಮೃತನ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು. ಎಲ್ಲಾ ಫೀಲ್ಡ್ ಸಿಬ್ಬಂದಿಗೆ ಗತ್ಯ ಸುರಕ್ಷತಾ ಉಪಕರಣ (ಪಿಪಿಇ) ಸಮಯಕ್ಕೆ ಸರಿಯಾಗಿ ನೀಡಬೇಕು ಎಂದು ಮನವಿ ಮಾಡಿದರು.
ಇಂಡಸ್ ಟವರ್ಸ್ ತನ್ನ ಎಲ್ಲಾ ಕಾಂಟ್ರ್ಯಾಕ್ಟರ್‌ಗಳ ಕಾರ್ಮಿಕರಿಗೂ ಕಾನೂನುಬದ್ಧ ರಕ್ಷಣೆ ನೀಡಬೇಕು. ಕಂಪನಿಯು ತಕ್ಷಣವೇ ಬಿಪಿಟಿಎಂಎಸ್ ಸಂಘಟನೆಯೊಂದಿಗೆ ಚರ್ಚೆ ಆರಂಭಿಸ ಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕಾರ್ಮಿಕ ಇಲಾಖೆಗೆ ಅರ್ಪಿಲಾಯಿತು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಜಯೇಶ, ಜಿಲ್ಲಾ ಸಂಚಾಲಕ ನಾಗರಾಜ ಸುರ್ವೆ, ಎಂ.ಶಿವಕುಮಾರ, ಬಿ.ನಾಗರಾಜ, ಎಚ್.ನಂದೇಶ, ಎಚ್.ಎಲ್.ಮಂಜಪ್ಪ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))