ಸಾರಾಂಶ
ಕನ್ನಡಪ್ರಭ ವಾರ್ತೆ ಬೇತಮಂಗಲ
ಕರ್ನಾಟಕ ಗಡಿಭಾಗದಲ್ಲಿ ಎಪಿಎಂಸಿ ಯಾರ್ಡ್ ನಿರ್ಮಿಸಬೇಕು ಎಂದು ಹೊರಟಾಗ ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿ ಅವಮಾನ ಮಾಡಿದರು. ತಮಗೆ ಎಪಿಎಂಸಿ ಜೀವನದ ಪಾಠ ಕಲಿಸಿದೆ ಎಂದು ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು.ರಾಜ್ಯದ ಗಡಿಭಾಗವಾದ ಎನ್.ಜಿ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಎಪಿಎಂಸಿ ಯಾರ್ಡ್ ಬಳಿ ಆಯುಧ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಮೀನು ಗುರುತಿಸಿದಾಗ ಅಪಪ್ರಚಾರ;ಎಪಿಎಂಸಿ ನಿರ್ಮಿಸಲು ಎನ್.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿದ್ದ ೨೫ ಎಕರೆ ಸರ್ಕಾರಿ ಜಮೀನು ಗುರುತಿಸಿ ಅಭಿವೃದ್ಧಿಪಡಿಸಲು ಮುಂದಾದ ಸಂದರ್ಭದಲ್ಲಿ ಹಲವರು ಅಪಪ್ರಚಾರ ಮಾಡಿದರು, ಆಗ ಮಂತ್ರಿಗಳ ಮನವೊಲಿಸಿದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಪರಿಸ್ಥಿತಿ ಅರಿತುಕೊಂಡು ಎಪಿಎಂಸಿ ಸ್ಥಾಪನೆಗೆ ಒಂದು ಕೋಟಿ ರು.ಗಳ ಅನುದಾನ ಬಿಡುಗಡೆಗೊಳಿಸಿದರು. ಉಳಿದ ಅಪಪ್ರಚಾರ ಎಲ್ಲಿ ಹೋಯಿತೋ ಗೊತ್ತಿಲ್ಲ ಎಂದರು.
ಸಾವಿರಾರು ಮಂದಿಗೆ ಕೆಲಸ;ಆಂಧ್ರ ಪ್ರದೇಶದ ವಿ ಕೋಟೆಯಲ್ಲಿ ೨ ಎಕರೆ ಪ್ರದೇಶದಲ್ಲಿ ಎಪಿಎಂಸಿ ಇದೆ. ಅಲ್ಲಿ ೨ ರಿಂದ ೩ ಸಾವಿರ ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ, ೨೫ ಎಕರೆ ಪ್ರದೇಶದಲ್ಲಿ ಎಪಿಎಂಸಿ ಅಭಿವೃದ್ಧಿಯಿಂದ ಎಷ್ಟು ಅಭಿವೃದ್ಧಿಗೊಳ್ಳಲಿದೆ, ಎಷ್ಟು ಸಾವಿರ ಜನರಿಗೆ ಉದ್ಯೋಗ ನೀಡಲಿದೆ ಎಂಬುದನ್ನು ನೀವೆ ಉಹಿಸಿಕೊಳ್ಳಿ ಎಂದು ಹೇಳಿದರು.
ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ವಿಜಯ್ ರಾಘವರೆಡ್ಡಿ, ಉಪಾಧ್ಯಕ್ಷ ಆನಂದಮೂರ್ತಿ, ನಿರ್ದೇಶಕರಾದ ಯಶೋಧಮ್ಮ ಶ್ರೀನಿವಾಸ್ ರೆಡ್ಡಿ, ನಗರಸಭೆ ಅಧ್ಯಕ್ಷೆ ಇಂದಿರಾ ಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಬೇತಮಂಗಲ ಗ್ರಾಪಂ ಅಧ್ಯಕ್ಷ ವೀನು ಕಾರ್ತಿಕ್, ಹುಲ್ಕೂರು ಅಧ್ಯಕ್ಷೆ ಭವಾನಿ ಜೈಪಾಲ್ ಮತ್ತಿತರರು ಇದ್ದರು.