ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಮುಂದಿನ ಪೌರಕಾರ್ಮಿಕರ ದಿನಾಚರಣೆ ಒಳಗೆ ಪೌರ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ದಸರಾ ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ಹಾಗೂ ಸಿಹಿ ವಿತರಿಸಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮತ್ತು ಸುಂದರ ಪಟ್ಟಣವನ್ನಾಗಿಸುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು ಎಂದರು.
ವಸತಿ ಕಲ್ಪಿಸುವ ಭರವಸೆ:ಪಟ್ಟಣದ ಸ್ವಚ್ಛತೆಗಾಗಿ ತಮ್ಮ ಆರೋಗ್ಯದ ಹಂಗು ತೊರೆದು ಕೆಲಸ ಮಾಡುವ ಪೌರ ಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು, ಪೌರ ಕಾರ್ಮಿಕರ ಕೊರತೆ ಇದೆ. ಪೌರಕಾರ್ಮಿಕರು ಸೇರಿದಂತೆ ಪುರಸಭೆಯ ನೌಕರರ ಹಲವಾರು ಸಮಸ್ಯೆಗಳಿವೆ. ಬಾಕಿ ಇರುವ ಸಂಬಳ ಹಾಗೂ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುವುದಲ್ಲದೆ ಮುಂದಿನ ಪೌರ ಕಾರ್ಮಿಕರ ದಿನಾಚರಣೆ ಒಳಗಾಗಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ಕೊಡಿಸಿ:ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣಕ್ಕೆ ನೀಡುವತ್ತ ಗಮನ ಹರಿಸಬೇಕು ಎಂದರು. ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹನಾಯ್ಡು, ಮುಖಾಧಿಕಾರಿ ಎ.ಶ್ರೀನಿವಾಸ್, ಸದಸ್ಯರಾದ ಶ್ರೀನಿವಾಸರೆಡ್ಡಿ, ನಂಜುಂಡಪ್ಪ, ಗಡ್ಡಂ ರಮೇಶ್, ರೇಷ್ಮಾಬಾನು ಮತ್ತಿತರರು ಇದ್ದರು.