ಮಾನವ-ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸುತ್ತಿದ್ದಾರೆ ಎಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಪ್ರಭಾಕರನ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಾನವ-ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸುತ್ತಿದ್ದಾರೆ ಎಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಪ್ರಭಾಕರನ್ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಡಿ.ವಿ.ಗುಂಡಪ್ಪ ಉಪನ್ಯಾಸ ಮಾಲೆ - 2ದಡಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿ, ಬಂಡೀಪುರ ಅರಣ್ಯ, ಕಾಡುಪ್ರಾಣಿ ರಕ್ಷಣೆಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಎಒನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್‌ಗಳ ಮೂಲಕ ಪ್ರಾಣಿಗಳ ಚಲನವಲನ ಪತ್ತೆ ಹಚ್ಚಿ, ಜನರಿಗೆ ಎಚ್ಚರಿಕೆ ನೀಡುವ ಕಮಾಂಡ್ ಸೆಂಟರ್ ಸ್ಥಾಪನೆ. ಅರಣ್ಯ ಕಾಡ್ಗಿಚ್ಚಿನಿಂದ ರಕ್ಷಿಸುವ ಸಲುವಾಗಿ ಅರಣ್ಯದಲ್ಲಿ ಬೆಂಕಿರೇಖೆ ನಿರ್ಮಿಸಲಾಗಿದೆ ಎಂದರು.
ಇದಕ್ಕಾಗಿ ಈ ವರ್ಷ 500 ಮಂದಿಯನ್ನು ಬೆಂಕಿ ನಂದಿಸುವ ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಅವರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಅಗ್ನಿಶಾಮಕ ದಳದಿಂದ ಯಾವ ರೀತಿ ಬೆಂಕಿ ನಂದಿಸಬೇಕು ಎಂಬ ಬಗ್ಗೆ ನಮ್ಮ ಸಿಬ್ಬಂದಿಗೂ ಮಾಹಿತಿಯನ್ನು ಪಡೆದು ಅವರ ಸಹಕಾರವನ್ನು ಪಡೆಯಲಾಗಿದೆ ಎಂದರು.ಹೆಚ್ಚುತ್ತಿರುವ ಮಾನವ ವಸಾಹತುಗಳು, ಕೃಷಿ ವಿಸ್ತರಣೆ, ಮತ್ತು ಹವಾಮಾನ ಬದಲಾವಣೆಯಿಂದಾಗಿ ಪ್ರಾಣಿಗಳು ಆಹಾರ ಮತ್ತು ಆಶ್ರಯಕ್ಕಾಗಿ ಮಾನವ ವಾಸಸ್ಥಾನಗಳಿಗೆ ನುಗ್ಗುವುದರಿಂದ ಇದು ಉಂಟಾಗುತ್ತದೆ. ಆನೆ, ಹುಲಿ, ಚಿರತೆಗಳು ಮತ್ತು ಕಾಡು ಹಂದಿಗಳಂತಹ ಪ್ರಾಣಿಗಳಿಂದ ಸಂಘರ್ಷ ಹೆಚ್ಚಾಗಿದ್ದು ಇದರ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ಮಾನವರು ಮತ್ತು ವನ್ಯಜೀವಿಗಳ ನಡುವಿನ ನಕಾರಾತ್ಮಕ ಸಂವಹನವಾಗಿದ್ದು, ಪ್ರಾಣಿಗಳ ಮಾನವ ವಿಸ್ತರಣೆ ಮತ್ತು ಅಭಿವೃದ್ಧಿಯಿಂದ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳನ್ನು ಕಳೆದುಕೊಳ್ಳುತ್ತವೆ. ಕಾಡಿನಂಚಿನ ಕೃಷಿ ಭೂಮಿಯಲ್ಲಿ ಪ್ರಾಣಿಗಳು ಆಹಾರವನ್ನು ಅರಸಿಕೊಂಡು ಬೆಳೆಗಳನ್ನು ನಾಶಪಡಿಸುವುತ್ತವೆ. ನೀರು ಮತ್ತು ಆಹಾರದ ಕೊರತೆ, ನಿರ್ವಹೆಣೆ ಇಲ್ಲದ ಕೆರೆ ಕಟ್ಟೆಗಳು, ನಿಂತು ಹೋಗಿರವ ಕಲ್ಲು ಕ್ವಾರೆಗಳು ಪ್ರಾಣಿಗಳನ್ನು ಮಾನವ ಪ್ರದೇಶಗಳಿಗೆ ಅನುವು ಮಾಡಿಕೊಡುತ್ತಿವೆ ಎಂದರು.ಸಂಘರ್ಷವನ್ನು ತಗ್ಗಿಸಲು ಸರ್ಕಾರವು ಹೆಲ್ಪ್‌ಲೈನ್‌ಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಿದೆ, ಆದರೆ ದೀರ್ಘಾವಧಿಯ ಮತ್ತು ವೈಜ್ಞಾನಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸೌರಶಕ್ತಿ ಬೇಲಿಗಳು ಮತ್ತು ಕಂದಕಗಳು, ಮುಂಚಿತವಾಗಿ ಎಚ್ಚರಿಕೆ ವ್ಯವಸ್ಥೆಗಳು, ಡ್ರೋನ್‌ಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಸ್ಥಳೀಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದೇಶದಲ್ಲೇ ನಂ. 2 ಸುರಕ್ಷಿತ ಅರಣ್ಯ ಪ್ರದೇಶ:ದಶಕಗಳ ರಕ್ಷಣೆಯಿಂದಾಗಿ ವನ್ಯಜೀವಿಗಳು, ವಿಶೇಷವಾಗಿ ಹುಲಿಗಳು ಮತ್ತು ಆನೆಗಳು ಹೆಚ್ಚಿವೆ. ಬಂಡೀಪುರ ವ್ಯಾಪ್ತಿ ಪ್ರದೇಶದಲ್ಲಿ 1116 ಆನೆಗಳು, 190ಕ್ಕೂ ಹೆಚ್ಚು ಹುಲಿಗಳು, ಉಳಿದ ಪ್ರಾಣಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ, ಇದರಿಂದಾಗಿ ಬಂಡೀಪುರವು ದೇಶದಲ್ಲೇ ನಂ. 2 ಸುರಕ್ಷಿgತ ಅರಣ್ಯ ಪ್ರದೇಶ, ಮತ್ತು ರಾಜ್ಯದಲ್ಲಿ ಹೆಚ್ಚು, ಆನೆ, ಹುಲಿಗಳನ್ನು ಹೊಂದಿದ ಪ್ರದೇಶವಾಗಿದ್ದು, ಇದಕ್ಕೆ ಎಲ್ಲರ ಸಹಕಾರವು ನೆರವಾಗಿದೆ ಎಂದರು.
ದಕ್ಷಿಣ ಭಾರತದ ಅತಿದೊಡ್ಡ ಅರಣ್ಯ ಪ್ರದೇಶಗಳಾದ ಬಂಡೀಪುರ-ನಾಗರಹೊಳೆ-ವಯನಾಡು-ಮುದುಮಲೈ, ಬಿಆರ್‌ಟಿ, ಮಹದೇಶ್ವರ ಬೆಟ್ಟ ವನ್ಯಧಾಂ ಸೇರಿದಂತೆ ಪರಿಸರ ಸೂಕ್ಷ್ಮ ವಲಯಗಳೊಂದಿಗೆ ವ್ಯಾಪಕ ಗಡಿಗಳನ್ನು ಹಂಚಿಕೊಂಡಿದ್ದು, ಪ್ರಾಣಿಗಳಿಗೆ ಯಾವುದೇ ಗಡಿ ನಿರ್ಬಂಧ ಇಲ್ಲಿದಿರುವುದು ಪ್ರಾಣಿಗಳ ಸಂಚಾರವು ವಿಸ್ತರಣೆಗೊಂಡು, ಕಾಡಂಚಿನ ಕಾರಿಡಾರ್‌ಗಳಿಗೆ ಬಂದಾಗ ಮಾನವ ಸಂಘರ್ಷ ಉಂಟಾಗುತ್ತದೆ, ದೇಶದ 10 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳು ಸೇರಿವೆ ಎಂದರು.ಬಂಡೀಪುರ ವ್ಯಾಪ್ತಿಯಲ್ಲಿ 19 ಹುಲಿಗಳನ್ನು ಸೆರೆ ಹಿಡಿದಿದ್ದು, ಗಾಯಗೊಂಡ 3 ಹುಲಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಂಡೀಪುರ ವ್ಯಾಪ್ತಿಯಲ್ಲಿ 314 ಕಿ,ಮೀ, ರೈಲು ಕಂಬಿಗಳನ್ನು ನಿರ್ಮಿಸಬೇಕಾಗಿದ್ದು ಈಗಾಗಲೇ 90. ಕಿ,ಮೀ ನಿರ್ಮಿಸಿದ್ದು, 27 ಕಿ.ಮಿ.ಗೆ ಅನುಮೋದನೆ ಸಿಕ್ಕಿದ್ದು, 8.5 ಕಿ,ಮಿಗೆ ಟೆಂಡರ್ ಆಗಿದೆ. ಕಾಡನ್ನೇ ನಂಬಿ ಜೀವನ ನಡೆಸುವವರಿಗೆ ಕಿರು ಉತ್ವನ್ನಗಳಿಗೆ ಅವಕಾಶ, ಆದಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲ, ಹೊಲಿಗೆ ತರಬೇಲಿ, ಸೋಲಾರ್, ಗ್ಯಾಸ್ ಸಂಪರ್ಕಗಳನ್ನು ಕಲ್ಪಿಸಿಕೊಡಲಾಗುತ್ತದ ಎಂದರು.
ಸಂಘದ ಜಿಲ್ಲಾಧ್ಯಕ್ಷ ಆರ್ .ಎನ್ .ಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಗಳಾದ ಸುರೇಶ್, ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಪತ್ರಕರ್ತರು ಭಾಗವಹಿಸಿದ್ದರು.