ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಳೆದ ನಾಲ್ಕು ದಿನಗಳಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ ಜಿಲ್ಲಾ ಮಟ್ಟದ ದಿ.ರಂಗಸ್ವಾಮಿ ಚೂರಿಗಿಡ್ನ ಸ್ಮಾರಕ ಹಾಕಿ ಪಂದ್ಯಾವಳಿಯಲ್ಲಿ ಯುನೈಟೆಡ್‌ ಸ್ಪೋರ್ಟ್ಸ್ ಕ್ಲಬ್‌ ಬೇರಳಿನಾಡು ತಂಡ 2-1 ಗೋಲುಗಳಿಂದ ರೋಚಕ ಗೆಲುವು ಸಾಧಿಸುವುದರೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿತು. ಅಲ್ಲದೇ 1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ರೋಚಕ ಆಟ ಪ್ರದರ್ಶಿಸಿ ಅಂತಿಮ ಕ್ಷಣದಲ್ಲಿ ಸೋಲುಂಡ ಅತಿಥೇಯ ಡಾಲ್ಫಿನ್ಸ್‌ ತಂಡ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತಲ್ಲದೇ 50 ಸಾವಿರ ರು. ನಗದು ಬಹುಮಾನಕ್ಕೆ ಪಡೆಯಿತು.ಭಾನುವಾರ ಜರುಗಿದ ಫೈನಲ್‌ ಪಂದ್ಯಾಟದಲ್ಲಿ ಪ್ರಥಮ ಕ್ವಾರ್ಟರ್ ನಲ್ಲಿ ವೆಂಕಟೇಶ್‌ ಕಂಜ ಮತ್ತು ಅಭಿಷೇಕ್‌ ಅವರು 2 ಗೋಲುಗಳನ್ನು ಬಾರಿಸುವುದರೊಂದಿಗೆ ಆರಂಭಿಕ ಮುನ್ನಡೆ ದೊರಕಿಸಿಕೊಟ್ಟರು. ನಂತರ ಡಾಲ್ಫೀನ್ಸ್‌ ತಂಡಕ್ಕೆ ಪೆನಾಲ್ಟಿ ಕಾರ್ನರ್ ದೊರೆತರೂ ಗೋಲು ಗಳಿಸುವಲ್ಲಿ ಡಾಲ್ಪಿನ್ಸ್ನ ಮುನ್ನಡೆ ಆಟಗಾರರು ವಿಫಲರಾದರು. ಡಾಲ್ಫಿನ್ಸ್‌ ತಂಡದ ಹಾಗೂ ಅಂತಾರಾಷ್ಟ್ರೀಯ ಆಟಗಾರ ಆಭರಣ್‌ ಸುದೇವ್‌ ಹಲವಾರು ಪ್ರಯತ್ನಗಳನ್ನು ಮಾಡಿದರಾದರೂ ಗೋಲುಗಳಿಸುವಲ್ಲಿ ವಿಫಲರಾದರು. ಡಾಲ್ಫಿನ್ಸ್ಸ ತಂಡದ ರಕ್ಷಣಾ ಆಟಗಾರ ತ್ರಿಶೂಲ್‌ ಮತ್ತು ಗೋಲ್‌ ಕೀಪರ್‌ ಬೋಪಣ್ಣ ಉತ್ತಮ ಆಟದಿಂದಾಗಿ ಮತ್ತಷ್ಟು ಗೋಲು ಗಳಿಸುವಲ್ಲಿ ಬೇರಳಿನಾಡು ತಂಡ ವಿಫಲವಾಯಿತು. ಬೇರಳಿನಾಡು ತಂಡದ ಮುನ್ನಡೆ ಆಟಗಾರ, ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರ ಮಹ್ಮದ್‌ ರಾಹಿಲ್‌ ಅವರ ಅತ್ಯುತ್ತಮ ಆಟದ ಪ್ರದರ್ಶನದಿಂದ ತಂಡ ಗೆಲುವು ಸಾಧಿಸುವಲ್ಲಿ ಯಶಸ್ಸನ್ನು ಪಡೆಯಿತು. ಪಂದ್ಯಾವಳಿಯ ಮೂರನೇ ಕ್ವಾರ್ಟರ್‌ ನ ಮುಕ್ತಾಯ ಹಂತದಲ್ಲಿ ಡಾಲ್ಫಿನ್ಸ್‌ ಗೆ ದೊರೆತ ಪೆನಾಲ್ಟಿ ಕಾರ್ನರ್‌ ನಲ್ಲಿ ಗೋಲು ಗಳಿಸಲು ವಿಫಲರಾದಾಗ, ಪ್ರೇಕ್ಷಕರು ಕೂಡ ಬೇಸರದಿಂದ ಆಟವನ್ನು ವೀಕ್ಷಿಸಿ, ಇನ್ನೇನು ಆಟ ಮುಗಿಯಿತೇನೊ ಎಂಬ ಕ್ಷಣದಲ್ಲಿ, ಅಂದರೆ ಕೊನೆಯ ಕ್ವಾರ್ಟರ್ ಆರಂಭವಾಗಿ ಅಂತಿಮ 2 ನಿಮಿಷ ಇರುವಾಗ ಆಟದ ಗತಿಯೇ ಬದಲಾಯಿತು. ಆ ಸಂದರ್ಭ ಡಾಲ್ಪಿನ್ಸ್ ಗೆ ದೊರೆತ ಪೆನಾಲ್ಟಿ ಕಾರ್ನರ್ ನಲ್ಲಿ ತಂಡದ ಪ್ರಮುಖ ಆಟಗಾರ ಆಭರಣ್‌ ಸುದೇವ್‌ ಆಕರ್ಷಕ ಗೋಲು ಬಾರಿಸುವುದರೊಂದಿಗೆ ಯುಎಸ್ಸಿ ಬೇರಳಿನಾಡು ತಂಡಕ್ಕೆ ಆತಂಕವನ್ನುಂಟು ಮಾಡಿದರು. ಕೊನೆಯ 40 ಸೆಕೆಂಡು ಗಳಿರುವಾಗ ವಿವಾದಾತ್ಮಕ ಪೆನಾಲ್ಟಿ ಕಾರ್ನರ್‌ ಡಾಲ್ಫಿನ್ಸ್‌ ತಂಡಕ್ಕೆ ದೊರೆಯಿತು. ಆ ಕ್ಷಣ ಕೆಲಕಾಲ ಎರಡೂ ತಂಡಗಳ ಆಟಗಾರರೂ ಮತ್ತು ಅಂಪೈರುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ತೀರ್ಪುಗಾರರ ಅಂತಿಮ ತೀರ್ಮಾನದಂತೆ ಡಾಲ್ಫಿನ್ಸ್‌ ತಂಡಕ್ಕೆ ಪೆನಾಲ್ಟಿ ಕಾರ್ನರ್ ನೀಡಲಾಯಿತು. ಅದರ ಸದುಪಯೋಗವನ್ನು ಬಳಸಿಕೊಳ್ಳಲು ವಿಫಲರಾದ ಡಾಲ್ಫಿನ್ಸ್‌ ತಂಡ ಕೊನೆಯಲ್ಲಿ 2-1 ಗೋಲುಗಳ ಅಂತರದಿಂದ ವೀರೋಚಿತವಾಗಿ ಸೋಲನ್ನೊಪ್ಪಬೇಕಾಯಿತು. ಮಿಂಚಿದ ಆಟಗಾರರು:ಬೇರಳಿನಾಡು ತಂಡದ ಪ್ರಮುಖ ಆಟಗಾರ ಮಹ್ಮದ್‌ ರಾಹೀಲ್‌, ಪ್ರಸ್ತುತ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ, ಇಡೀ ಕ್ರೀಡಾಂಗಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಜಿಂಕೆಯಂತೆ ಒಡಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಬೇರಳಿನಾಡು ತಂಡದ ಪರವಾಗಿ ರಾಷ್ಟ್ರೀಯ ಆಟಗಾರ ವೆಂಕಟೇಶ್‌ ಕಂಜಿ, ಇಂಡಿಯನ್‌ ಕ್ಯಾಂಪರ್‌ ಆಕಾಶ್‌ ಪೂವಣ್ಣ, ಮತ್ತೋರ್ವ ಭಾರತ ತಂಡದ ಕ್ಯಾಂಪ್‌ ನಲ್ಲಿ ಭಾಗವಹಿಸಿದ್ದ ಬಿಪಿನ್‌, ಅಭಿಷೇಕ್‌ ಮತ್ತು ಗೋಲ್‌ ಕೀಪರ್‌ ಅಂಕಿತ್‌ ಮಲ್ಲಿಕ್‌ ಆಕರ್ಷಕ ಆಟ ಪ್ರದರ್ಶಿಸಿದರು. ಡಾಲ್ಫಿನ್ಸ್‌ ಪರವಾಗಿ ಅಂತಾರಾಷ್ಟ್ರೀಯ ಆಟಗಾರ ಸೋಮವಾರಪೇಟೆಯ ಆಭರಣ್‌ ಸುದೇವ್‌, ವಚನ್‌ ಅಶೋಕ್‌, ರಾಷ್ಟ್ರೀಯ ಆಟಗಾರ ಮೂಲತಃ ಸೋಮವಾರಪೇಟೆಯ ಆಟಗಾರ ತ್ರಿಶೂಲ್‌, ಗೋಲ್‌ ಕೀಪರ್‌ ಸಾಯ್‌ ತಂಡದ ಆಟಗಾರ ಬೋಪಣ್ಣ, ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಫೈನಲ್‌ ಪಂದ್ಯಾಟದ ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರರಾದ ದೀಕ್ಷಿತ್‌ ಹಾಗೂ ಕೀರ್ತಿ ಮುತ್ತಪ್ಪ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ತಾಂತ್ರಿಕ ಟೇಬಲ್‌ ನಲ್ಲಿ ಬೊಳ್ಳಚಂಡ ನಾಣಯ್ಯ, ಅಯ್ಯಪ್ಪ, ವಿನೋದ್‌ ಜೆಸಿಬಿ, ಪೊನ್ನಣ್ಣ, ಸುಪ್ರೀತ್‌ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಆಟಗಾರರರಿಂದ ಪಂದ್ಯ ವೀಕ್ಷಣೆ: ಫೈನಲ್‌ ಪಂದ್ಯಾಟವನ್ನು ಹಾಕಿ ಕರ್ನಾಟಕದ ಕಾರ್ಯದರ್ಶಿ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಅಂಜಪರವಂಡ ಸುಬ್ಬಯ್ಯ, ಮತ್ತೋರ್ವ ನಾಯಕ ಸೋಮವಾರಪೇಟೆಯ ಅರ್ಜುನ್ ಹಾಲಪ್ಪ, ಭಾರತ ಹಾಕಿ ತಂಡದ ಉಪನಾಯಕ ಎಸ್.ವಿ.ಸುನಿಲ್‌, ಅಂತಾರಾಷ್ಟ್ರೀಯ ಹಾಕಿ ಆಟಗಾರ ಸೋಮವಾರಪೇಟೆಯ ವಿಕ್ರಂ ಕಾಂತ್‌, ಮೂಲತಃ ಸೋಮವಾರಪೇಟೆಯವರಾದ ಹಾಗೂ ಪ್ರಸ್ತುತ ಭಾರತೀಯ ಹಾಕಿ ಕಿರಿಯರ ತಂಡದ ತರಬೇತುದಾರ ಸಿ.ಬಿ.ಜನಾರ್ಧನ್, ಇಂಡಿಯನ್‌‌ ಆರ್ಮಿ ತಂಡದ ತರಬೇತುದಾರ ಸೋಮವಾರಪೇಟೆಯ ದೇವದಾಸ್‌ ಬಿದ್ದಯ್ಯ ಮತ್ತಿತರ ಹಿರಿಯ ಆಟಗಾರರು ಪಂದ್ಯಾಟವನ್ನು ವೀಕ್ಷಿಸಿ ಆಟಕ್ಕೆ ಬೆಂಬಲ ನೀಡಿದರು. ಅತ್ಯುತ್ತಮ ಆಟಗಾರರು:ಪಂದ್ಯಾವಳಿಯ ಅತ್ಯುತ್ತಮ ಆಟಗಾರರಾಗಿ ಭಾರತ ತಂಡದ ಆಟಗಾರ ಡಾಲ್ಪಿನ್ಸ್‌ ತಂಡದ ಆಭರಣ್‌ ಸುದೇವ್‌, ಗೋಲ್‌ ಕೀಪರ್‌ ಪ್ರಶಸ್ತಿಯನ್ನು ಡಾಲ್ಫಿನ್ಸ್ನ ಬೋಪಣ್ಣ, ಡಿಫೆಂಡರ್‌ ಆಗಿ ಕೂಡಿಗೆ ಕ್ರೀಡಾ ನಿಲಯ ತಂಡದ ವಿಶ್ವಜೀತ್‌, ಅತ್ಯುತ್ತಮ ಫಾರ್ವರ್ಡ್‌ ಆಗಿ ಬೇರಳಿನಾಡು ತಂಡದ ಮಹ್ಮದ್‌ ರಾಹಿಲ್‌, ಮಿಡ್‌ ಫಿಲ್ಡರ್‌ ಸುನಿಲ್‌ ಪಿಬಿ(ಮಲ್ಮ ತಂಡ) ಪಡೆದುಕೊಂಡರು. ಅತ್ಯುತ್ತಮ ಶಿಸ್ತು ಬದ್ಧ ತಂಡವಾಗಿ ಕೂಡಿಗೆ ಕ್ರೀಡಾ ನಿಲಯ ತಂಡ ಪಡೆದುಕೊಂಡಿತು. ವಿಜೇತ ಹಾಗೂ ರನ್ನರ್ಸ್‌ ತಂಡಕ್ಕೆ ಟ್ರೋಫಿ ಹಾಗೂ ನಗದು ದಾನಿಗಳಾದ ಮೂಲತಃ ಸೋಮವಾರಪೇಟೆಯ ಉದ್ಯಮಿ ಬಿ.ಆರ್.‌ ವೇಣು, ವಿನಯ್‌, ವಿಜಯ್‌, ಲಲಿತಾ ರಂಗಸ್ವಾಮಿ, ಅಂತಾರಾಷ್ಟ್ರೀಯ ಆಟಗಾರರಾದ ಅರ್ಜುನ್ ಹಾಲಪ್ಪ, ವಿಕ್ರಂ ಕಾಂತ್‌, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ, ಎಸ್‌.ವಿ.ಸುನಿಲ್‌, ತರಬೇತುದಾರ ಜನಾರ್ಧಾನ್, ದೇವದಾಸ್‌, ಡಾಲ್ಫಿನ್ಸ್‌ ಅಧ್ಯಕ್ಷ ಮಹೇಶ್‌ ಎಂ.ಈ. ಮತ್ತು ಗೌರವ ಅಧ್ಯಕ್ಷ ಅಶೋಕ್‌, ಕಾರ್ಯದರ್ಶಿ ಮಂಜುನಾಥ್‌ ಬಿ.ಎನ್‌. ಮತ್ತಿತರರು ವಿತರಿಸಿದರು. ಪತ್ರಕರ್ತ ವಿಜಯ್‌ ಹಾನಗಲ್‌ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಖ್ಯಾತ ಗಾಯಕ ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ಸೋಮವಾರಪೇಟೆಯ ಗಾನಕೋಗಿಲೆ ಕೆ.ಎಸ್.ಹರೀಶ್‌ ತಮ್ಮ ಉತ್ತಮ ಕಂಠದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.