ಕನ್ನಡಪ್ರಭ ವಾರ್ತೆ ವಿಜಯಪುರ: ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ವಿಕಲಚೇತನರನ್ನು ನೇಮಿಸಬೇಕು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಮಾಡಿದ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಮುಂಬರುವ ವಿಧಾನ ಪರಿಷತ ಅಧಿವೇಶನದಲ್ಲಿಯೂ ಈ ಕುರಿತು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಮಾಲ್ ಗಳು ಸೇರಿದಂತೆ ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್ ಬಳಸಲಾಗುತ್ತದೆ. ಈ ಲಿಪ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ವಿಶೇಷಚೇತನರನ್ನೇ ನೇಮಕಾತಿ ಮಾಡಬೇಕು. ಇದರಿಂದ ಅವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಅಲ್ಲದೇ, ಅವರಿಗೆ ಕೆಲಸ ಭಾರ ಎನಿಸುವುದಿಲ್ಲ. ಅಂಗವಿಕಲರು ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.ವಿಜಯಪುರ ಜಿಲ್ಲೆಯಿಂದಲೇ ಪ್ರಾರಂಭವಾಗುವ ಈ ಸಮಾಜಮುಖಿ ಕೆಲಸ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದು ಶಾಸಕ ಸುನೀಲಗೌಡ ಪಾಟೀಲ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಕಟಕಧೋಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.