ಸ್ವಾತಂತ್ರ್ಯದಿನೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನದಲ್ಲಿ ದಕ್ಷಿಣ ಕರ್ನಾಟಕದಲ್ಲಿ ದೀರ್ಘಕಾಲ ಆಡಳಿತ ನಡೆಸಿದ (ಕಿ.ಶ 350-1004) ಪ್ರಮುಖ ರಾಜವಂಶವಾದ ಪಶ್ಚಿಮ ಗಂಗರ ಆಡಳಿತ, ವಾಸ್ತುಶಿಲ್ಪ, ಶಿಕ್ಷಣ, ಸಂಸ್ಕೃತಿ ಅನಾವರಣಗೊಳ್ಳಲಿದೆ.

ಸಂಪತ್ ತರೀಕೆರೆ

 ಬೆಂಗಳೂರು : ಸ್ವಾತಂತ್ರ್ಯದಿನೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನದಲ್ಲಿ ದಕ್ಷಿಣ ಕರ್ನಾಟಕದಲ್ಲಿ ದೀರ್ಘಕಾಲ ಆಡಳಿತ ನಡೆಸಿದ (ಕಿ.ಶ 350-1004) ಪ್ರಮುಖ ರಾಜವಂಶವಾದ ಪಶ್ಚಿಮ ಗಂಗರ ಆಡಳಿತ, ವಾಸ್ತುಶಿಲ್ಪ, ಶಿಕ್ಷಣ, ಸಂಸ್ಕೃತಿ ಅನಾವರಣಗೊಳ್ಳಲಿದೆ.

ಗಂಗರ ರಾಜವಂಶಸ್ಥರು ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದ್ದು, ರಾಜ್ಯ ಸರ್ಕಾರ ಕೂಡ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ಆಗಸ್ಟ್‌ ಮೊದಲ ವಾರವೇ ವಿಭಿನ್ನ ತಳಿಗಳ ಲಕ್ಷಾಂತರ ಹೂವುಗಳಿಂದ ರಚಿಸಲಾದ ಕಲಾಕೃತಿಗಳು ಪರಿಸರ ಪ್ರೇಮಿಗಳನ್ನು, ಜನರನ್ನು ಸೆಳೆಯಲಿವೆ.

ನಾಗನಾಥೇಶ್ವರ ದೇವಸ್ಥಾನ ಪ್ರಮುಖ:

ಲಾಲ್‌ಬಾಗ್‌ನ ಗಾಜಿನ ಮನೆಯ ಮಧ್ಯೆ ಭಾಗದಲ್ಲಿ ಗಂಗರು ನಿರ್ಮಿಸಿದ ಸುಮಾರು 1300 ವರ್ಷಗಳಷ್ಟು ಹಳೆಯದಾದ ನಾಗನಾಥೇಶ್ವರ ದೇವಸ್ಥಾನ ಲಕ್ಷಾಂತರ ಪುಷ್ಪಗಳಿಂದ ನಿರ್ಮಾಣಗೊಳ್ಳಲಿದೆ. ಬೆಂಗಳೂರಿನ ಬೇಗೂರು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನ ಪಶ್ಚಿಮ ಗಂಗರು, ಚೋಳರು ಮತ್ತು ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟ 5 ಶಿವಲಿಂಗಗಳನ್ನು(ಪಂಚಲಿಂಗ) ಒಳಗೊಂಡಿದೆ. ಇಲ್ಲಿ ಸಿಕ್ಕಿರುವ ಕ್ರಿ.ಶ.890ರ ಕನ್ನಡ ಶಾಸನವು ಬೆಂಗಳೂರು ಎಂಬ ಹೆಸರಿನ ಮೊದಲ ಉಲ್ಲೇಖವನ್ನು ಹೊಂದಿದೆ ಎನ್ನುತ್ತಾರೆ ಇತಿಹಾಸ ತಜ್ಞರು.

ಬೇಗೂರಿನ ನಾಗೇಶ್ವರ ದೇವಸ್ಥಾನವು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದ್ದು, ಮೂಲತಃ ಪಶ್ಚಿಮ ಗಂಗಾ ರಾಜವಂಶದ ಅವಧಿಯಲ್ಲಿ ನಿರ್ಮಿಸಲ್ಪಟ್ಟು ನಂತರ ಚೋಳರಿಂದ ವಿಸ್ತರಿಸಲ್ಪಟ್ಟಿದೆ. ಅಪರೂಪದ ಪಂಚಲಿಂಗ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ನಾಗೇಶ್ವರ, ನಗರೇಶ್ವರ, ಚೋಳೇಶ್ವರ, ಕರ್ಣೇಶ್ವರ, ಕಾಳಿಕಾಮತೇಶ್ವರ ದೇವಾಲಯಗಳು ವಿಭಿನ್ನವಾಗಿ ನಿರ್ಮಾಣಗೊಂಡಿವೆ. ಪ್ರತಿಯೊಂದು ದೇವಾಲಯವು ಶಿವಲಿಂಗವನ್ನು ಹೊಂದಿದ್ದು, ಅದರ ಮುಂದೆ ನಂದಿಯನ್ನು ಇರಿಸಲಾಗಿದೆ, ಇದು ಶಾಸ್ತ್ರೀಯ ದ್ರಾವಿಡ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ.

ಜೈನ ಬಸದಿ ಮತ್ತೊಂದು ಆಕರ್ಷಣೆ:

ಗಂಗರಸರ ಮಂತ್ರಿ ಚಾವುಂಡರಾಯನು ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ಮೇಲೆ ದ್ರಾವಿಡ ಶೈಲಿಯ ಸುಂದರವಾದ ಬಸದಿಯನ್ನು (ಜೈನ ದೇವಾಲಯ) ನಿರ್ಮಿಸಿದನು. ಇದನ್ನು‘ಬೊಪ್ಪ-ಚೈತ್ಯಾಲಯ’ ಎಂದು ಕರೆಯಲಾಗುತ್ತಿದೆ. ಈ ಬಸದಿಯ ಗರ್ಭಗುಡಿಯಲ್ಲಿ 22ನೇ ತೀರ್ಥಂಕರನಾದ ನೇಮಿನಾಥ ಸ್ವಾಮಿಯ ವಿಗ್ರಹವಿದೆ. ಗಾಜಿನ ಮನೆಯಲ್ಲಿ ಮುಖ್ಯವೇದಿಕೆಯಲ್ಲಿ ನಿರ್ಮಾಣಗೊಳ್ಳಲಿರುವ ನಾಗನಾಥೇಶ್ವರ ಅಥವಾ ನಾಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಈ ಜೈನ ಬಸದಿಯನ್ನು ಪುಷ್ಪದಲ್ಲಿ ನಿರ್ಮಿಸಲು ಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.

ಇನ್ನು ಮುಖ್ಯವೇದಿಕೆಯ ಎಡಭಾಗದಲ್ಲಿ ವರ್ಟಿಕಲ್‌ ಗಾರ್ಡನ್‌, ಗೋಮಟೇಶ್ವರ ಪ್ರತಿಮೆ (ಅರ್ಧ ಭಾಗ ಬಂಡೆ ಮತ್ತು ಉಳಿದಾರ್ಧ ಗೋಮಟೇಶ್ವರ ) ಮತ್ತು ಬಲಭಾಗದಲ್ಲಿ ಗಂಗರ ಧ್ವಜಸ್ಥಂಬ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಗಂಗರ ರಾಜವಂಶ ಸ್ಥಾಪಕ ದಡಿಗ ಅಥವಾ ಕೊಂಗುಣೀವರ್ಮ, ಶ್ರೀಪುರುಷ, ರಾಚಮಲ್ಲ, ಮಾರಸಿಂಹ ಸೇರಿದಂತೆ ಇತರೆ ರಾಜರುಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗುವುದು. ಮುಖ್ಯವಾಗಿ ಗಂಗರ ಕಾಲದ ಶಾಸನಗಳು, ವೀರಗಲ್ಲುಗಳು ಇತ್ಯಾದಿಗಳ ಮಾದರಿಗಳನ್ನು ಮಾಡಲು ಯೋಜಿಸಲಾಗಿದೆ. ಗಂಗ ಅರಸರು ಸುದೀರ್ಘ ಕಾಲ ರಾಜ್ಯಭಾರ ಮಾಡಿ, ಕನ್ನಡ ಭಾಷೆ, ಶಿಕ್ಷಣ, ನೀರಾವರಿ, ಧರ್ಮ, ಸಾಹಿತ್ಯ ವಾಸ್ತು ಮತ್ತು ಮೂರ್ತಿಶಿಲ್ಪ ಮೊದಲಾದವುಗಳ ಸುಸ್ಥಿರ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದಾರೆ. ಅವರ ಬಗೆಗಿನ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಬೇಕು. ಈ ಹಿನ್ನೆಲೆಯಲ್ಲಿ ಈ ಪ್ರದರ್ಶನ ಆಯೋಜಿಸಲಾಗುತ್ತಿದೆ.

- ಡಾ.ಎಂ. ಜಗದೀಶ್‌, ಹೆಚ್ಚುವರಿ ನಿರ್ದೇಶಕರು, ರಾಜ್ಯ ತೋಟಗಾರಿಕೆ ಇಲಾಖೆ

12 ದಿನ ಪ್ರದರ್ಶನ

ಆಗಸ್ಟ್‌ 6 ರಿಂದ 17ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಗಂಗರು ಕೋಲಾರದಲ್ಲಿ ನಿರ್ಮಿಸಿದ ಕೆರೆಗಳು, ನಂದಿ ಬೆಟ್ಟದ ಯೋಗ ನಂದೀಶ್ವರ ದೇವಸ್ಥಾನ, ಕೋನಾರ್ಕ್‌, ರಾಷ್ಟ್ರಕೂಟರ ಮೇಲಿನ ಯುದ್ಧದ ಸನ್ನಿವೇಶ ಇತ್ಯಾದಿಗಳು ಪ್ರದರ್ಶನಗೊಳ್ಳಿವೆ.