ಕ್ಷೇತ್ರದಲ್ಲಿ ನನ್ನ ಕಾರ್ಯ ವೈಖರಿ ಬಗ್ಗೆ ಶ್ವೇತ ಪತ್ರ ಹೊರಡಿಸಿ, ವಿರೋಧ ಪಕ್ಷದವರ ಟೀಕೆಗಳಿಗೆ ಉತ್ತರಿಸಲು, ಬಹಿರಂಗ ಚರ್ಚೆಗೆ ಸಿದ್ಧ. ನಾವು ಮಾಡಿರುವ ಕೆಲಸಗಳನ್ನು ಆಧಾರ ಸಮೇತ ರಿಪೋರ್ಟ್ ಕಾರ್ಡ್ ಮೂಲಕ ಉತ್ತರಿಸುತ್ತಿದ್ದೇನೆ. ದೂರುಗಳಿದ್ದರೆ ನವ ದೊಡ್ಡಬಳ್ಳಾಪುರ ಆ್ಯಪ್ ಮೂಲಕ ನೀಡಬಹುದಾಗಿದೆ. ತಾಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ₹25 ಕೋಟಿ ಮಂಜೂರಾಗಿದ್ದು, ₹8 ಕೋಟಿ ಬಿಡುಗಡೆಯಾಗಿದೆ. ವಸತಿ ಹಾಗೂ ನಿವೇಶನ ರಹಿತ ಬಡ ಕುಟುಂಬದವರು ಅರ್ಜಿ ಸಲ್ಲಿಸಿದರೆ, ಒಂದು ವರ್ಷದಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

₹193 ಕೋಟಿ ವೆಚ್ಚದ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಗೆ ಇದೇ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ನಗರದ ಅರ್ಕಾವತಿ ಬಡಾವಣೆಯಲ್ಲಿ ಅಂಜನಾದ್ರಿ ಚಾರಿಟಬಲ್‌ ಟ್ರಸ್ಟ್ ಹಾಗೂ ಬಿಜೆಪಿಯಿಂದ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಾಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಆರು ನಮ್ಮ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ತಾಯಿ ಮಗು ಆಸ್ಪತ್ರೆ ಉನ್ನತೀಕರಣ ಮಾಡಲಾಗುವುದು. ದೊಡ್ಡಬೆಳವಂಗಲದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್‌ಸೇರಿದಂತೆ ಮೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮನವಿ ಸಲ್ಲಿಸಲಾಗಿದೆ. ಡಯಾಲಿಸಿಸ್ ಉನ್ನತೀಕರಣ, ರಕ್ತನಿಧಿ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಅನುದಾನಗಳ ಕೊರತೆ ನಡುವೆಯೂ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ವಸತಿಯಂತಹ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. 2024- 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 700 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆಯುವ 10 ಬಡ ಕುಟುಂಬದ ವಿದ್ಯಾರ್ಥಿಗಳಿಗೆ ₹50 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರು ಪಿಯು ಕಾಲೇಜು ಮಂಜೂರು:

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿನ ಪ್ರೌಢಶಾಲೆಯಲ್ಲಿ ₹14 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಬಾಶೆಟ್ಟಿಹಳ್ಳಿ, ಸಾಸಲು ಸೇರಿದಂತೆ ಹೊಸದಾಗಿ ಆರು ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿವೆ. ಇನ್ನು ತಾಲೂಕಿನಲ್ಲಿ ಉನ್ನತ ಶಿಕ್ಷಣದಲ್ಲಿ ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜುಗಳ ಅಗತ್ಯವಿದೆ. ಡಿಪ್ಲೋಮಾ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಮಂಜೂರಾತಿಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಂದ ಭರವಸೆ ದೊರೆತಿದೆ ಎಂದು ಹೇಳಿದರು.

ಬಹಿರಂಗ ಚರ್ಚೆಗೆ ಸಿದ್ದ:

ಕ್ಷೇತ್ರದಲ್ಲಿ ನನ್ನ ಕಾರ್ಯ ವೈಖರಿ ಬಗ್ಗೆ ಶ್ವೇತ ಪತ್ರ ಹೊರಡಿಸಿ, ವಿರೋಧ ಪಕ್ಷದವರ ಟೀಕೆಗಳಿಗೆ ಉತ್ತರಿಸಲು, ಬಹಿರಂಗ ಚರ್ಚೆಗೆ ಸಿದ್ಧ. ನಾವು ಮಾಡಿರುವ ಕೆಲಸಗಳನ್ನು ಆಧಾರ ಸಮೇತ ರಿಪೋರ್ಟ್ ಕಾರ್ಡ್ ಮೂಲಕ ಉತ್ತರಿಸುತ್ತಿದ್ದೇನೆ. ದೂರುಗಳಿದ್ದರೆ ನವ ದೊಡ್ಡಬಳ್ಳಾಪುರ ಆ್ಯಪ್ ಮೂಲಕ ನೀಡಬಹುದಾಗಿದೆ. ತಾಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ₹25 ಕೋಟಿ ಮಂಜೂರಾಗಿದ್ದು, ₹8 ಕೋಟಿ ಬಿಡುಗಡೆಯಾಗಿದೆ. ವಸತಿ ಹಾಗೂ ನಿವೇಶನ ರಹಿತ ಬಡ ಕುಟುಂಬದವರು ಅರ್ಜಿ ಸಲ್ಲಿಸಿದರೆ, ಒಂದು ವರ್ಷದಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫೆ.20ರಿಂದ ಸೀರೆ ಉತ್ಸವ:

ನೇಕಾರರಿಗೆ ಸೀರೆಗಳ ಮಳಿಗೆ ಆರಂಭ, ಫೆಬ್ರವರಿ 20ರಿಂದ ದೊಡ್ಡಬಳ್ಳಾಪುರ ಹಬ್ಬ, ಸೀರೆ ಉತ್ಸವ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿವೆ. ಬಾಶೆಟ್ಟಿಹಳ್ಳಿಗೆ ಕಾವೇರಿ ನೀರು, ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ವಿಸ್ತರಣೆಗೆ ಪ್ರಯತ್ನ ನಡೆಯುತ್ತಿದೆ ಎಂದರು.

ಶಿಕ್ಷಣ ತಜ್ಞ ಗಣಪತಿಭಟ್ ಉಪನ್ಯಾಸ ನೀಡಿದರು. ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಘಟಕ ಅಧ್ಯಕ್ಷ ನಾಗೇಶ್, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಟಿಎಪಿಎಂಸಿಎಸ್ ನಿರ್ದೇಶಕ ರಮೇಶ್, ನಗರಸಭಾ ಸದಸ್ಯರಾದ ಹಂಸವೇಣಿ, ಬಂತಿ ವೆಂಕಟೇಶ್, ವತ್ಸಲಾ, ಶಿವು, ಲಕ್ಷ್ಮೀಪತಿ, ನಾಗರತ್ನ, ಜಿ.ಜೆ.ನವೀನ್, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ನಾರಾಯಣಸ್ವಾಮಿ, ಪ್ರೇಮ್ ಕುಮಾರ್, ಮುನಿಶಂಕರ್, ಮಧುಕುಮಾರ್, ಪುಷ್ಪ ಶಿವಶಂಕರ್, ಬಿ.ಸಿ.ನಾರಾಯಣಸ್ವಾಮಿ, ತಿ.ರಂಗರಾಜು, ಗೋಪಿ, ಅಶ್ವತ್ಥನಾರಾಯಣ್‌ಕುಮಾರ್, ಡಾ.ನಾರಾಯಣ್ ಮತ್ತಿತರರಿದ್ದರು.