ಕನ್ನಡಪ್ರಭ ವಾರ್ತೆ ಬೇತಮಂಗಲ

ಸೃಷ್ಟಿಯ ಉಗಮಕ್ಕೂ ಮುನ್ನವೇ ಅವತರಿಸಿದ ಮಹಾನ್ ಮಾನವತಾವಾದಿ, ಶ್ರಮ ಸಂಸ್ಕೃತಿಯ ಹರಿಕಾರ ಶ್ರೀ ಆದಿಜಾಂಬವನ ಜಯಂತಿಯನ್ನು ಮಾದಿಗ ಸಮುದಾಯದ ಮುಖಂಡರು ಹಾಗೂ ಯುವಕರು ಆದಿಜಾಂಬವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆಯೊಂದಿಗೆ ಆಚರಿಸಿದರು.

ರಾಜ್ಯ ಕಾರ್ಯದರ್ಶಿ ಸಿ.ಶ್ರೀನಿವಾಸ್ ಮಾತನಾಡಿ, ಐತಿಹಾಸಿಕ ಪ್ರಸಿದ್ಧ ಆವಣಿ ಜಾತ್ರಾ ಮಹೋತ್ಸವಕ್ಕೂ ಮುನ್ನ ಬೇತಮಂಗಲದಲ್ಲಿ ಆದಿಜಾಂಬವರಿಗೆ ಮೊದಲ ಪೂಜೆ ಸಲ್ಲಿಸುವುದು ಅನಾದಿಕಾಲದ ಸಂಪ್ರದಾಯ, ಪೂಜೆಯ ನಂತರವೇ ಆವಣಿ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಅಧಿಕೃತವಾಗಿ ಚಾಲನೆ ಪಡೆಯಲಿವೆ ಎಂದು ತಿಳಿಸಿದರು.

ದಕ್ಷಿಣ ಗಯಾ ಎಂದೇ ಪ್ರಸಿದ್ಧಿಯಾಗಿರುವ ಮುಳಬಾಗಿಲು ತಾಲೂಕಿನ ಆವಣಿ ಕ್ಷೇತ್ರವು ರಾಮಾಯಣದ ಹಿನ್ನೆಲೆ ಜೊತೆಗೆ ಮಾದಿಗ ಸಮುದಾಯದ ಆರಾಧ್ಯ ದೈವ ಶ್ರೀ ಆದಿ ಜಾಂಬವಂತ ಸ್ವಾಮಿಯ ನೆಲೆಬೀಡಾಗಿ ಅತೀವ ಧಾರ್ಮಿಕ ಮಹತ್ವ ಪಡೆದಿದೆ. ಪ್ರತಿ ವರ್ಷದ ಮಹಾಶಿವರಾತ್ರಿಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೂ ಮುನ್ನ ನಡೆಯುವ ಆದಿ ಜಾಂಬವಂತನ ವಿಶೇಷ ಪೂಜೆಯು ಈ ಭಾಗದ ವಿಶಿಷ್ಟ ಸಂಪ್ರದಾಯವಾಗಿದೆ ಎಂದು ವಿವರಿಸಿದರು.

ಈ ಬಾರಿಯ ಮಹೋತ್ಸವವು ಮಾಂತ್ರಿಕ ಮುನಿ, ಕುಲಗುರು ಆನಂದಮುನಿ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಪೂಜಾ ಕಾರ್ಯಕ್ರಮದಲ್ಲಿ ಜಾಂಬವಂತನ ವಿಗ್ರಹಕ್ಕೆ ಪವಿತ್ರ ತೀರ್ಥಾಭಿಷೇಕ ಇತರೆ ಪೂಜೆ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.ಕ್ಷೇತ್ರದಲ್ಲಿ ಅತಿ ದೊಡ್ಡ ಮತದಾರರ ಸಮೂಹ ಹೊಂದಿರುವ ಮಾದಿಗ ಸಮುದಾಯವನ್ನು ವ್ಯವಸ್ಥಿತವಾಗಿ ಕಡೆಗಣಿಸುತ್ತಿರುವ ಜನಪ್ರತಿನಿಧಿಗಳ ಧೋರಣೆ ಖಂಡನೀಯ ಎಂದು ಆಕ್ರೋಶ ಹೊರಹಾಕಿ, ಜನಪ್ರತಿನಿಧಿಗಳ ಬೇಜವಾಬ್ದಾರಿತನದ ವಿರುದ್ಧ ಸಂಘಟಿತ ಹೋರಾಟದ ಎಚ್ಚರಿಕೆ ನೀಡಿದರು.


ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಆರ್.ವೇಣು ಮಾತನಾಡಿ, ದೇವತೆಗಳಿಗಿಂತಲೂ ಆರು ತಿಂಗಳ ಮೊದಲೇ ಜನಿಸಿದ ಮಹಾಪುರುಷ ಆದಿಜಾಂಬವರು ಎಂಬ ನಂಬಿಕೆ ಈ ಭಾಗದ ಜನಪದದಲ್ಲಿದೆ. ಆದಿಜಾಂಬವರ ತತ್ವಗಳು ಮತ್ತು ಶ್ರಮದ ಬದುಕು ಸಮುದಾಯಕ್ಕೆ ಸ್ಫೂರ್ತಿಯಾಗಬೇಕು. ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಆಚರಣೆಗಳು ಪೂರಕವಾಗಿವೆ ಎಂದು ತಿಳಿಸಿದರು.

ಗೆನ್ನೇರಹಳ್ಳಿಯಿಂದ ಪಲ್ಲಕ್ಕಿ ಉತ್ಸವ:

ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆನ್ನೇರಹಳ್ಳಿ ಗ್ರಾಮದ ಮಾದಿಗ ಸಮುದಾಯದಿಂದ ವಿಜೃಂಭಣೆಯ ಜಾಂಬವಂತ ಸ್ವಾಮಿಯ ಪಲ್ಲಕ್ಕಿ ಉತ್ಸವ ಆಯೋಜಿಸಿದ್ದು, ಬೇತಮಂಗಲದ ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿದ ನಂತರ ಪಲ್ಲಕ್ಕಿಯು ಆವಣಿ ಬೆಟ್ಟಕ್ಕೆ ತೆರಳಲು ಚಾಲನೆ ನೀಡಲಾಯಿತು.

ಗ್ರಾಪಂ ಅಧ್ಯಕ್ಷೆ ಸುವರ್ಣ ವೆಂಕಟರಾಮಪ್ಪ, ಮುಖಂಡರಾದ ನಾರಾಯಣ ಸ್ವಾಮಿ, ಲಕ್ಷ್ಮಯ್ಯ ಅರ್ಜುನ್, ಲಿಂಗೇಶ್, ಪುವ್ವಿ, ಗಿರೀಶ್, ನಾಗೇಶ್ ,ಸಂದಾ ಮುನಿಸ್ವಾಮಿ, ಬೇತಮಂಗಲ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್, ಮಾಜಿ ಅಧ್ಯಕ್ಷೆ ಮಮತಾ ಗಣೇಶ್, ಮಾಜಿ ಸದಸ್ಯರಾದ ಸಂಧ್ಯಾ ತಿರುಪತಿ, ಗಂಗಮ್ಮ ಕೊಂಡಪ್ಪ, ಶೇಷಾದ್ರಿ, ಸುರೇಂದ್ರಗೌಡ, ಪಂಚಾಯಿತಿ ಸಿಬ್ಬಂದಿ ರಾಮಪ್ಪ , ಸೋಮಶೇಖರ್ ,ವೆಂಕಟೇಶ್, ವೆಂಕಟರಾಮಪ್ಪ, ತಾಯಪ್ಪ, ಚಂದು, ಮುಖಂಡರಾದ ವೆಂಕಟಪ್ಪ, ವೆಂಕಟರಾಮಪ್ಪ, ಬೋಡೆಪ್ಪ, ಕುರರು ಬಾಬು (ಚಂದ್ರಕುಮಾರ್), ಶಂಕರಪ್ಪ, ರವಿಕುಮಾರ್, ಚಿನ್ನ, ರೆಡ್ಡಪ್ಪ, ಜಿ.ಶ್ರೀನಿವಾಸ, ಪವನ್ ಕುಮಾರ್, ಬಳುವನಹಳ್ಳಿ

ಚಿಕ್ಕ ಕಣ್ಣಪ್ಪ, ಕನಡಿಸ್ ಕುಮಾರ್, ಶಾಂತಕುಮಾರ್, ಶಿವಕುಮಾರ್, ಅನಂತಪ್ಪ ಇದ್ದರು.