ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ದಾವಣಗೆರೆ ಪೊಲೀಸರು ಇದೀಗ ಮತ್ತೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಸೇರಿದಂತೆ ನಾಲ್ವರನ್ನು ಬಂಧಿಸುವ ಮೂಲಕ ಒಂದೇ ವಾರದ ಅವಧಿಯಲ್ಲಿ 8 ಜನರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ದಾವಣಗೆರೆ ಪೊಲೀಸರು ಇದೀಗ ಮತ್ತೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಸೇರಿದಂತೆ ನಾಲ್ವರನ್ನು ಬಂಧಿಸುವ ಮೂಲಕ ಒಂದೇ ವಾರದ ಅವಧಿಯಲ್ಲಿ 8 ಜನರನ್ನು ಬಂಧಿಸಿದ್ದಾರೆ.

ದಾವಣಗೆರೆ ತಾ. ತುರ್ಚಘಟ್ಟ ಗ್ರಾಮದ ವಾಸಿ, ಗುತ್ತಿಗೆದಾರ, ವಸತಿ ಸಚಿವ ಜಮೀರ್ ಅಹಮ್ಮದ್‌ ಆಪ್ತನಾದ ಕಾಂಗ್ರೆಸ್ ಮುಖಂಡ ಅನ್ವರ್ ಬಾಷಾ, ಪಾರಸ್, ಕೃಷ್ಣಮೂರ್ತಿ, ಮಂಜುನಾಥ ಅಲಿಯಾಸ್ ಧೋನಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರ ಬಂಧನದೊಂದಿಗೆ ಡ್ರಗ್ಸ್‌ ಜಾಲದ 8 ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದ್ದ, ಮತ್ತಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ವಾರವಷ್ಟೇ ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆಯ ಸಾರ್ವಜನಿಕ ಉದ್ಯಾನದಲ್ಲಿ ಮಾದಕವಸ್ತು ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದ ಬೆನ್ನಲ್ಲೇ ಮತ್ತೆ ನಾಲ್ವರಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ವೇದಮೂರ್ತಿ ಅಲಿಯಾಸ್ ಶಾಮನೂರು ವೇದ, ರಾಮ್ ಸ್ವರೂಪ್‌, ಧೋಲಾರಾಮ್‌, ದೇವ ಕಿಶನರನ್ನು ಪೊಲೀಸರು ಕಳೆದ ವಾರ ಬಂಧಿಸಿದ್ದು, ಅದೇ ದಿನ ಮೂವರು ತಪ್ಪಿಸಿಕೊಂಡಿದದ್ದರು. ಇದೀಗ ಇದೇ ಮಾದಕವಸ್ತುಗಳ ಸೇವನೆ, ಸಾಗಾಟ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಭಾನುವಾರ ಬಂಧಿತ ವೇದಮೂರ್ತಿ ಡ್ರಗ್ಸ್‌ ಗ್ಯಾಂಗ್‌ನಲ್ಲಿ ಬಂಧಿತ ನಾಲ್ವರು ಇದ್ದರೆಂಬ ವಿಚಾರ ಬೆಳಕಿಗೆ ಬಂದಿದೆ. ಶಾಮನೂರು ವೇದ ಬಂಧನದ ವೇಳೆ 3-4 ಮಂದಿ ಪರಾರಿಯಾಗಿದ್ದರು. ಈಗ ಪೊಲೀಸರು ಕಾರ್ಯಾಚರಣೆ ನಡೆಸಿ, ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ರಾಜಸ್ಥಾನದಿಂದ ಡ್ರಗ್ಸ್‌ ತಂದು ದಾವಣಗೆರೆಯಲ್ಲಿ ಮಾರಾಟ ಮಾಡುತ್ತಿದ್ದ ವಿಚಾರ ತನಿಖೆ ವೇಳೆ ಬಯಲಾಗಿದ್ದು, ಡ್ರಗ್ಸ್ ಜಾಲದ ಮೂಲಕ್ಕೆ ಕೈ ಹಾಕುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

ಶ್ರೀಮಂತರು, ವರ್ತಕರು, ಉಳ್ಳವರು, ಶ್ರೀಮಂತರ ಮಕ್ಕಳನ್ನು ಗುರಿಯಾಗಿಸಿಕೊಂಡು, ಹೆಚ್ಚು ಹಣಕ್ಕೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದು, ಹೆಚ್ಚಿನ ಹಣಕ್ಕೆ ಡ್ರಗ್ಸ್ ಖರೀದಿಸುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು, ಸುಲಭ ಮಾರ್ಗದಲ್ಲಿ ಹೆಚ್ಚು ಹಣ ಸಂಪಾದಿಸುವ ದಂಧೆಯನ್ನು ಈ ಆರೋಪಿಗಳು ನಡೆಸುತ್ತಿದ್ದರೆಂಬ ವಿಚಾರ ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನದ ಪೆಡ್ಲರ್‌ಗಳಿಂದ ಪ್ರತಿ ಗ್ರಾಂ ಮಾದಕವಸ್ತುವಿಗೆ 3500 ರು.ನಿಂದ 4 ಸಾವಿರ ರು.ವರೆಗೆ ವೇದಮೂರ್ತಿ, ದೇವಕಿಶನ್ ಖರೀದಿಸುತ್ತಿದ್ದರು. ಹೀಗೆ ಖರೀದಿಸಿದ ಮಾದಕವಸ್ತುಗಳನ್ನು ಇತರೆ ಆರೋಪಿಗಳು ಹೆಚ್ಚು ಹಣಕ್ಕೆ ಖರೀದಿಸಿ, ಶ್ರೀಮಂತರು, ಉದ್ಯಮಿಗಳಿಗೆ ಪೂರೈಸುತ್ತಿದ್ದರೆಂಬ ಮಾಹಿತಿ ವಿಚಾರಣೆ ವೇಳೆ ಬಯಲಾಗಿದೆ. ಜಿಲ್ಲಾದ್ಯಂತ ಗಾಂಜಾ, ಮಾದಕವಸ್ತುಗಳ ಅಕ್ರಮ ಮಾರಾಟ, ಸಾಗಾಟ, ಬಳಕೆ ಮಾಡುವವರ ಮೇಲೆ ಹದ್ದಿನ ಕಟ್ಟಿಟ್ಟ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದಾರೆ.

ಮಾದಕವಸ್ತು ನಿಗ್ರಹ ಪಡೆ ರಚನೆಯಾದ ನಂತರ 8 ಪ್ರಕರಣಗಳಲ್ಲಿ ಒಟ್ಟು 24 ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ. ದಾವಣಗೆರೆ, ಹರಿಹರ, ಹೊನ್ನಾಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಾಂಜಾ, ಮಾದಕವಸ್ತುಗಳ ಪ್ರಕರಣಗಳು ಬೆಳೆಕಿಗೆ ಬಂದಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪೊಲೀಸ್ ಇಲಾಖೆ ಪಣ ತೊಟ್ಟಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ ಸಹ ಇಲಾಖೆಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.