ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ2024-25ನೇ ಸಾಲಿನ ತುರ್ತು ಕುಡಿವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು 2.70 ಕೋಟಿ ರು. ವೆಚ್ಚದ ಟಾಸ್ಕ್ ಫೋರ್ಸ್ ಕ್ರಿಯಾ ಯೋಜನೆಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅನುಮೋದನೆ ನೀಡಿದೆ.
ಜಿಲ್ಲೆಯ ಬರ ಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಪ್ರತಿ ತಾಲೂಕುಗಳಿಗೆ ಮೊದಲ ಹಂತದಲ್ಲಿ 25 ಲಕ್ಷ ರು.ದಂತೆ ಒಟ್ಟು ರು.1.5 ಕೋಟಿ ರು. ಎರಡನೇ ಹಂತದಲ್ಲಿ 1.2 ಕೋಟಿ ರು. ಮೂರನೇ ಹಂತದಲ್ಲಿ 60.69 ಲಕ್ಷ ರು.ದಂತೆ ಒಟ್ಟು 3. 64 ಕೋಟಿ ಮಂಜೂರು ಮಾಡಿದೆ.ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ 1.5 ಕೋಟಿಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಒಟ್ಟು 94 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಎರಡನೇ ಹಂತದಲ್ಲಿ ಮಂಜೂರಾದ ರು.1.2ಕೋಟಿ ರು. ಆರು ತಾಲೂಕುಗಳಿಂದ ಒಟ್ಟು 88 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಭೆಯ ಅನುಮೋದನೆಗೆ ಮಂಡಿಸಲಾಯಿತು. ಜಿಲ್ಲೆಗೆ ಮಂಜೂರಾದ ರು.3.64 ಕೋಟಿಗೆ ಸಂಬಂಧಿಸಿದಂತೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಹಾಗೂ ಇತರೆ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಹೊಸ ಪೈಪ್ ಲೈನ್ ಅಳವಡಿಕೆಗೆ 60 ಲಕ್ಷ ರು. ವೆಚ್ಚದ 10 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಲಾಯಿತು.ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸೀರುದ್ದೀನ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಒ.ಪರಮೇಶ್ವರಪ್ಪ, ಆರೋಗ್ಯ ಇಲಾಖೆ ಡಾ.ಚಂದ್ರಶೇಖರ್ ಕಂಬಾಳಿ ಮಠ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.-----ಬಾಕ್ಸ:
ಶಾಲಾ, ಅಂಗನವಾಡಿಗೆ ನೀರು ಕಲ್ಲಿಸಿಜಲ ಜೀವನ್ ಮಿಷನ್ ಯೋಜನೆಯಡಿ ಮನೆ-ಮನೆಗೆ ನಲ್ಲಿ ನೀರು ಸಂಪರ್ಕಿಸುವ ವೇಳೆ, ಗ್ರಾಮಾಂತರ ಪ್ರದೇಶದಲ್ಲಿನ ಶಾಲೆ, ಆಸ್ಪತ್ರೆ, ಅಂಗನವಾಡಿ, ಹಾಸ್ಟೆಲ್‍ಗಳಿಗೆ ತಪ್ಪದೇ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.