ಕೆಎಂಇಆರ್‌ಸಿ ಅಧ್ಯಕ್ಷ ಸ್ಥಾನದಿಂದ ಶಾಲಿನಿ ರಜನೀಶ್‌ ಬದಲಿಸಿ: ಹಿರೇಮಠ

| Published : May 30 2024, 12:47 AM IST

ಕೆಎಂಇಆರ್‌ಸಿ ಅಧ್ಯಕ್ಷ ಸ್ಥಾನದಿಂದ ಶಾಲಿನಿ ರಜನೀಶ್‌ ಬದಲಿಸಿ: ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಂಇಆರ್‌ಸಿಯ ಕಾರ್ಯ ವ್ಯಾಪ್ತಿಯನ್ನು ಸರ್ಕಾರದ ಶಾಸಕರು ಮತ್ತು ಸರ್ಕಾರದ ಇಲಾಖೆ ಅಧಿಕಾರಿಗಳು ಗೌರವಿಸಬೇಕು. ಅದರಂತೆ ಈ ಹಣದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು.

ಹುಬ್ಬಳ್ಳಿ:

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಅಧ್ಯಕ್ಷೆ ಶಾಲಿನಿ ರಜನೀಶ್ ಅವರನ್ನು ಕೆಳಗಿಳಿಸಿ ನಿವೃತ್ತ ನ್ಯಾಯಾಧೀಶರನ್ನು ಆ ಸ್ಥಾನಕ್ಕೆ ನೇಮಿಸಬೇಕೆಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಿನಿ ರಜನೀಶ ಅವರ ಹಸ್ತಕ್ಷೇಪ, ಸರ್ವಾಧಿಕಾರಿ ಆಡಳಿತ ಶೈಲಿಯಿಂದ ಅಲ್ಲಿನ ಸಿಬ್ಬಂದಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಎಂಇಆರ್‌ಸಿ ಅಧಿಕಾರಿಗಳು ಹಾಗೂ ಗಣಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಾಮರಸ್ಯದಿಂದ ಗಣಿ ಬಾಧಿತ ಜನರ ಆದ್ಯತೆ ಪೂರೈಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಸುದೀರ್ಘ ಪತ್ರ ಬರೆಯುವುದಾಗಿ ತಿಳಿಸಿದರು.

ಬಳ್ಳಾರಿ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಬಗ್ಗೆ ಸುಪ್ರೀಂಕೋರ್ಟ್ ಈ ವರೆಗೆ ₹ 25 ಸಾವಿರ ಕೋಟಿ ಪರಿಸರ ಪುನಶ್ಚೇತನಕ್ಕಾಗಿ ಮತ್ತು ಗಣಿ ಬಾಧಿತ ಜನರ ಮಾನವೀಯ ವಿಕಾಸಕ್ಕಾಗಿ ಮೀಸಲಿಟ್ಟಿದೆ. ಈ ಹಣಕ್ಕೆ ಸರ್ಕಾರ ಒಂದು ಕಂಪನಿ ಮಾಡಿ, ಅದರ ಮೇಲುಸ್ತುವಾರಿಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಾದಂತಹ ಜಸ್ಟಿಸ್ ಬಿ. ಸುದರ್ಶನ ರೆಡ್ಡಿ ಅವರನ್ನು ಪ್ರಾಧಿಕಾರವಾಗಿ ನೇಮಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.

ಕೆಎಂಇಆರ್‌ಸಿಯ ಕಾರ್ಯ ವ್ಯಾಪ್ತಿಯನ್ನು ಸರ್ಕಾರದ ಶಾಸಕರು ಮತ್ತು ಸರ್ಕಾರದ ಇಲಾಖೆ ಅಧಿಕಾರಿಗಳು ಗೌರವಿಸಬೇಕು. ಅದರಂತೆ ಈ ಹಣದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು. 283 ಹಳ್ಳಿಗಳನ್ನು ಗಣಿ ಬಾಧಿತ ಎಂದು ಘೋಷಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು 466 ಹಳ್ಳಿಗಳನ್ನು ಗಣಿ ಬಾಧಿತ ಹಳ್ಳಿಗಳು ಎಂದು ಘೋಷಿಸಿದ್ದಾರೆ. ಇದು ರಾಜಕೀಯ ಒತ್ತಡದಿಂದ ಗಣಿ ಬಾಧಿತವಲ್ಲದಿದ್ದರೂ ಸೇರಿಸಲಾಗಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಲಕ್ಷ್ಮಣ ಬಕ್ಕಾಯಿ, ಶಮಿ ಮಹ್ಮದ್ ಮುಲ್ಲಾ ಸೇರಿದಂತೆ ಹಲವರಿದ್ದರು.