ಅರಸೀಕೆರೆ ತಾಲೂಕಿಗೆ ಕಡೂರು ಉಪಕೇಂದ್ರದಿಂದ ವಿದ್ಯುತ್ ಪೂರೈಕೆ ನಡೆಯುತ್ತಿದ್ದು, ಯಾವುದೇ ತೊಂದರೆ ಉಂಟಾದರೂ ಸ್ಥಳೀಯವಾಗಿ ಪರಿಹಾರ ದೊರೆಯದೆ ಅಧಿಕಾರಿಗಳು ಕೈಕಟ್ಟಿಕೊಂಡು ನಿಲ್ಲುವ ಸ್ಥಿತಿ ಇತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ದೃಢ ಸಂಕಲ್ಪದಿಂದಲೇ ಶಾಸಕನಾದ ಒಂದೇ ವರ್ಷದೊಳಗೆ 220 ಕೆವಿ ಸ್ವೀಕರಣೆ ಕೇಂದ್ರವನ್ನು ಮಂಜೂರು ಮಾಡಿಸಿಕೊಂಡು, ಗೀಜಿಹಳ್ಳಿ ಸಮೀಪ ವಿದ್ಯುತ್ ಘಟಕ ಸ್ಥಾಪನೆಗೆ ಕಾರಣನಾದೆ. ಅದರ ಪರಿಣಾಮವಾಗಿ ಇಂದು ಅರಸೀಕೆರೆ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆ ದಶಕಗಳಿಂದ ಎದುರಿಸುತ್ತಿದ್ದ ವಿದ್ಯುತ್ ಅಸ್ಥಿರತೆ ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೈಗೊಂಡ ಯೋಜನೆಗಳು ಇಂದು ಫಲ ನೀಡುತ್ತಿದ್ದು, ಅರಸೀಕೆರೆ ತಾಲೂಕು ವಿದ್ಯುತ್ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರವು ಕೇವಲ ತಾಲೂಕು ಮಟ್ಟದಲ್ಲಲ್ಲದೆ ರಾಜ್ಯಮಟ್ಟದಲ್ಲಿಯೇ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು. ತಾವು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅರಸೀಕೆರೆ ತಾಲೂಕಿಗೆ ಕಡೂರು ಉಪಕೇಂದ್ರದಿಂದ ವಿದ್ಯುತ್ ಪೂರೈಕೆ ನಡೆಯುತ್ತಿದ್ದು, ಯಾವುದೇ ತೊಂದರೆ ಉಂಟಾದರೂ ಸ್ಥಳೀಯವಾಗಿ ಪರಿಹಾರ ದೊರೆಯದೆ ಅಧಿಕಾರಿಗಳು ಕೈಕಟ್ಟಿಕೊಂಡು ನಿಲ್ಲುವ ಸ್ಥಿತಿ ಇತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ದೃಢ ಸಂಕಲ್ಪದಿಂದಲೇ ಶಾಸಕನಾದ ಒಂದೇ ವರ್ಷದೊಳಗೆ 220 ಕೆವಿ ಸ್ವೀಕರಣೆ ಕೇಂದ್ರವನ್ನು ಮಂಜೂರು ಮಾಡಿಸಿಕೊಂಡು, ಗೀಜಿಹಳ್ಳಿ ಸಮೀಪ ವಿದ್ಯುತ್ ಘಟಕ ಸ್ಥಾಪನೆಗೆ ಕಾರಣನಾದೆ. ಅದರ ಪರಿಣಾಮವಾಗಿ ಇಂದು ಅರಸೀಕೆರೆ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ ಎಂದು ಹೇಳಿದರು.ರಾತ್ರಿ ಸಮಯದಲ್ಲಿ ಗೃಹಜ್ಯೋತಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಮನೆಗಳಿಗೆ ನಿರಂತರ ವಿದ್ಯುತ್ ಒದಗಿಸುವುದರ ಜೊತೆಗೆ, ಹಗಲು ವೇಳೆಯಲ್ಲಿ ರೈತರಿಗೆ ಕನಿಷ್ಠ ಎಂಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗುವಂತೆ ಸೋಲಾರ್ ವಿದ್ಯುತ್ ಘಟಕಗಳನ್ನು ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಈ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ನೇರವಾಗಿ ರೈತರ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುತ್ತಿದ್ದು, ಇದರಿಂದ ಬಯಲುಸೀಮೆಯ ರೈತರ ಜೀವನಶೈಲಿಯಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುಮಾರು 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೋಲಾರ್ ವಿದ್ಯುತ್ ಘಟಕಗಳು ಇನ್ನೂ ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದ್ದು, ಯೋಜನೆಯ ಉದ್ದೇಶದಂತೆ ಅನುಷ್ಠಾನಗೊಂಡಲ್ಲಿ ವಿದ್ಯುತ್ ಬೆಳಕು ಮಾತ್ರವಲ್ಲದೆ ರೈತರ ಬದುಕಿಗೂ ಹೊಸ ಬೆಳಕು ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.“ನಾನು ಮಣ್ಣಿಗೆ ಸೇರುವವರೆಗೂ ಅರಸೀಕೆರೆ ಜನತೆ ನನ್ನನ್ನು ಕೈಬಿಡುವುದಿಲ್ಲ. ಯಾರೇ ಅಭ್ಯರ್ಥಿಯನ್ನು ಎದುರು ನಿಲ್ಲಿಸಿದರೂ ಅವರು ನಾಮಮಾತ್ರವಾಗಿರುತ್ತಾರೆ. ನನ್ನ ರಾಜಕೀಯ ನಿರ್ಣಯಗಳ ಹಿಂದೆ ಒಂದೇ ಉದ್ದೇಶವಿದ್ದು, ಅದು ತಾಲೂಕಿನ ಅಭಿವೃದ್ಧಿಯೇ ಆಗಿದೆ” ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ನಿಮಗೆ ಮಂತ್ರಿಯಾಗುವ ಆಸೆ ಇರುವಂತೆ ನನಗೂ ಮಂತ್ರಿಯಾಗುವ ಆಶಯವಿದೆ. ಅಧಿಕಾರವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ನಾವು ಸನ್ಯಾಸಿಗಳಲ್ಲ, ದ್ರೋಹ ಮಾಡಿದ್ದಾರೆ ಎಂಬ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ನಾನು ದ್ರೋಹ ಮಾಡಿದ್ದೇನೆ ಎನ್ನುವುದಾದರೆ ಜನರೇ ನನಗೆ ತೀರ್ಪು ನೀಡಬೇಕಿತ್ತು. ಆದರೆ ಜನ ನನ್ನ ಕೆಲಸಗಳನ್ನು ಗಮನಿಸಿದ್ದಾರೆ. ಅಭಿವೃದ್ಧಿಯೇ ನನ್ನ ಉತ್ತರ. ಅದಕ್ಕಾಗಿಯೇ ಜನ ನನ್ನನ್ನು ಕೈಬಿಟ್ಟಿಲ್ಲ ಎಂದು ಹೇಳಿದರು.
ಅರಸೀಕೆರೆಯ ಸಮಗ್ರ ಅಭಿವೃದ್ಧಿಗೆ ತಾವು ಪಣತೊಟ್ಟಿರುವುದಾಗಿ ತಿಳಿಸಿದ ಅವರು, ಜೂನಿಯರ್ ಕಾಲೇಜ್ ಸಮೀಪ ಇನ್ನೂ ಎಂಟು ದಿನಗಳಲ್ಲಿ ಇಂಡೋರ್ ಸ್ಟೇಡಿಯಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಅದೇ ದಿನ ಈಜುಕೊಳವನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗುವುದು. ಜನರ ಆರೋಗ್ಯ ಮತ್ತು ದೈಹಿಕ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಇಂತಹ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.ಈ ವರ್ಷದಿಂದ ಅರಸೀ ಉತ್ಸವವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಯೋಜನೆ ಹೊಂದಿದ್ದು, ಮುಂದಿನ ವರ್ಷಗಳಲ್ಲಿಯೂ ಅದನ್ನು ನಿರಂತರವಾಗಿ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷ ಎಂ. ಸಮಿವುಲ್ಲಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಚೆಸ್ಕಾಂ ಅಧಿಕಾರಿ ಜಯಪ್ಪ, ಮುಖಂಡರಾದ ಸಿಕಂದರ್, ಮಾಜಿ ಸದಸ್ಯರಾದ ವೆಂಕಟಮನಿ, ಜಿ.ಟಿ. ಗಣೇಶ್, ದರ್ಶನ್, ತಾಪಂ ಮಾಜಿ ಸದಸ್ಯೆ ಮಂಜುಳಾಬಾಯಿ ಚಂದ್ರನಾಯ್ಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.