ಬಾಳೆಹೊನ್ನೂರುಪಟ್ಟಣದಲ್ಲಿ ಬಿ.ಕಣಬೂರು ಗ್ರಾಪಂ ನಿಂದ ನಡೆದ ಗಣರಾಜ್ಯೋತ್ಸವಕ್ಕೆ ಪೊಲೀಸ್ ಇಲಾಖೆ, ನಾಡಕಚೇರಿ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಶಿಕ್ಷಕರು ಗೈರು ಹಾಜರಾಗಿ ರಾಷ್ಟ್ರೀಯ ಹಬ್ಬಕ್ಕೆ ಅಪಮಾನ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ರವಿಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದಲ್ಲಿ ಬಿ.ಕಣಬೂರು ಗ್ರಾಪಂ ನಿಂದ ನಡೆದ ಗಣರಾಜ್ಯೋತ್ಸವಕ್ಕೆ ಪೊಲೀಸ್ ಇಲಾಖೆ, ನಾಡಕಚೇರಿ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಶಿಕ್ಷಕರು ಗೈರು ಹಾಜರಾಗಿ ರಾಷ್ಟ್ರೀಯ ಹಬ್ಬಕ್ಕೆ ಅಪಮಾನ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ರವಿಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.ಕಲಾರಂಗ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ರಾಷ್ಟ್ರೀಯ ಹಬ್ಬ ಆಚರಣೆಗೆ ಪೂರ್ವಭಾವಿಯಾಗಿ ಗ್ರಾಪಂ ನಿಂದ ಸಭೆ ಕರೆಯಲಾಗುತ್ತದೆ. ಆದರೆ ಆ ಸಭೆಗೂ ಅಧಿಕಾರಿಗಳು ಆಗಮಿಸದೆ ನಿರ್ಲಕ್ಯ್ಯ ತೋರುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಬೇಕಾದ ಶಿಕ್ಷಕರು ತಮ್ಮ ಶಾಲೆ, ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರೆತರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಧ್ವಜ ವಂದನೆಗೆ ಬರಬೇಕಿದ್ದ ಪೊಲೀಸ್ ಸಿಬ್ಬಂದಿ, ನಾಡ ಕಚೇರಿ ವಿದ್ಯಾರ್ಥಿಗಳು ಸಹ ಗೈರಾಗಿದ್ದಾರೆ. ಎಲ್ಲರಿಗೂ ಖುದ್ದಾಗಿ ಆಹ್ವಾನ ನೀಡಿದರೂ ಈ ಮನೋಭಾವ ಹೊಂದಿರುವುದು ಸರಿಯಲ್ಲ. ಈ ರೀತಿಯಾದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳು ಸಾರ್ವಜನಿಕ ಆಚರಣೆ ಯಾಗದೆ ನಿಲುಗಡೆಯಾಗುವ ಆತಂಕವಿದೆ.ಈ ಹಿನ್ನೆಲೆಯಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಗೈರಾದ ಇಲಾಖೆಗಳ ಅಧಿಕಾರಿಗಳು, ಶಾಲೆ, ಕಾಲೇಜು ಗಳಿಗೆ ನೋಟಿಸ್ ನೀಡಿ ಕಾರಣ ಕೇಳಲಾಗುವುದು ಎಂದು ಹೇಳಿದರು.ಜಯಪುರ ಬಿಜಿಎಸ್ ಕಾಲೇಜು ಉಪನ್ಯಾಸಕಿ ಗಾಯತ್ರಿದೇವಿ ಮಾತನಾಡಿ, ಭಾರತೀಯ ಸಂವಿಧಾನ ವಿಶ್ವಕ್ಕೆ ಆದರ್ಶ ಪ್ರಾಯವಾಗಿದ್ದು, ಉದಾತ್ತ ಚಿಂತನೆ ಹೊಂದಿದೆ. ಎಲ್ಲ ಧರ್ಮಗಳು ಒಂದೇ ರೀತಿಯಲ್ಲಿ ಬದುಕಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬರಿಗೂ ನೀಡಿದ್ದು, ಹಕ್ಕುಗಳನ್ನು ಅನುಭವಿಸುವ ನಮಗೆ ಕರ್ತವ್ಯಗಳ ಬಗ್ಗೆಯೂ ಪ್ರಜ್ಞೆ ಇರಬೇಕಿದೆ. ನಾವು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬಾರದ ಹಾಗೆ ಕರ್ತವ್ಯ ನಿರ್ವಹಿಸ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಪ್ರಮುಖ ರಾದ ಮಹಮ್ಮದ್ ಹನೀಫ್, ಹಿರಿಯಣ್ಣ, ಎಚ್.ಜೆ.ವಿಕ್ರಮ್, ಇಬ್ರಾಹಿಂ ಶಾಫಿ, ಸನತ್ ಶೆಟ್ಟಿ, ಎಂ.ಎಸ್.ಅರುಣೇಶ್, ಎಂ.ಜೆ.ಮಹೇಶ್ ಆಚಾರ್ಯ, ಮಹಮ್ಮದ್ ಜುಹೇಬ್, ಸದಾಶಿವ, ಶಶಿಕಲಾ, ಕೋಕಿಲ, ಪ್ರಭಾಕರ್ ಪ್ರಣಸ್ವಿ, ಕಾಶಪ್ಪ, ರಾಮಪ್ಪ ಮತ್ತಿತರರು ಹಾಜರಿದ್ದರು.-- (ಬಾಕ್ಸ್)--

ನಾಡಕಚೇರಿಯಲ್ಲಿ ಧ್ವಜಾರೋಹಣ ಇಲ್ಲ: ಅಧಿಕಾರಿಗಳ ಗೈರು ರಾಷ್ಟ್ರೀಯ ಹಬ್ಬವಾದ ಗಣತಂತ್ರ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲೂಯೂ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ಮಾಡಬೇಕಿದೆ. ಆದರೆ ಪಟ್ಟಣದ ನಾಡಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಪಟ್ಟಣದಲ್ಲಿ ಹಾಲಿ ನಾಡಕಚೇರಿ ಕಟ್ಟಡ ತಾತ್ಕಾಲಿಕವಾಗಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆಯುತ್ತಿದ್ದು ಅಲ್ಲಿ ಧ್ವಜಾ ರೋಹಣ ಮಾಡಿಲ್ಲ. ಇನ್ನು ಹೊಸ ನಾಡಕಚೇರಿ ಕಟ್ಟಡದಲ್ಲೂ ಧ್ವಜಾರೋಹಣ ಮಾಡಿಲ್ಲ. ಸಾರ್ವಜನಿಕ ಸಮಾರಂಭದಲ್ಲೂ ಭಾಗವಹಿಸಿಲ್ಲ. ಸರ್ಕಾರಿ ಕಚೇರಿಗಳಲ್ಲಿಯೇ ಈ ಪರಿಸ್ಥಿತಿ ಆದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಪ್ರತೀ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜವಂದನೆ ಸಲ್ಲಿಸಲು ಬರುತ್ತಿದ್ದ ಪೊಲೀಸರು ಈ ಬಾರಿ ಸಮಾರಂಭಕ್ಕೆ ಗೈರಾಗಿರುವುದು ಸರಿಯಲ್ಲ. ಕಾನೂನು ಪಾಲನೆ ಮಾಡಬೇಕಾದ ಪೊಲೀಸರೆ ಹೀಗೆ ಮಾಡಿದರೆ ಎಂದು ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ ಪ್ರಶ್ನಿಸಿದ್ದಾರೆ. ಗಣತಂತ್ರ ದಿನದಂದು ಕೆಲವು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಕಳುಹಿಸದೆ ಪಾಠ ಪ್ರವಚನ ಮಾಡುತ್ತ ನಿರ್ಲಕ್ಷಿಸಿದ್ದಾರೆ ಎಂದು ಕೆಲವು ಪಾಲಕರು ಸಹ ದೂರಿದ್ದಾರೆ.

೨೬ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ, ಕಾಲೇಜಿನ ಸಾಧಕ ಕ್ರೀಡಾಪಟು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರವಿಚಂದ್ರ, ರಂಜಿತಾ, ಚಂದ್ರಮ್ಮ, ಮಹಮ್ಮದ್ ಹನೀಫ್, ಅರುಣೇಶ್, ಸದಾಶಿವ, ಕಾಶಪ್ಪ ಇದ್ದರು.೨೬ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ನಾಡಕಚೇರಿ ಕಟ್ಟಡದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡದಿರುವುದು.