ಕನ್ನಡಪ್ರಭ ವಾರ್ತೆ ಬೆಳಗಾವಿ
ವಯೋವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಕಲಿ ಬಂಗಾರದ ಸರದ ಆಮಿಷವೊಡ್ಡಿ ಅಸಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಅಂತರ-ಜಿಲ್ಲಾ ಖದೀಮರ ಜಾಲವನ್ನು ಭೇದಿಸುವಲ್ಲಿ ರಾಯಬಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹1.40 ಲಕ್ಷ ಮೌಲ್ಯದ ಬಂಗಾರದ ಬೋರಮಾಳ ಸರವನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಾಗಮ್ಮ ಗಿಡ್ಡಪ್ಪ(71) ಹಾಗೂ ಜೆ.ಪುಟ್ಟಪ್ಪ ಗಿಡ್ಡಪ್ಪ(39) ಎಂದು ಗುರುತಿಸಲಾಗಿದೆ. ಬಂಧಿತರಿಂದ ವಂಚನೆ ಪ್ರಕರಣದಲ್ಲಿ ಕಳುವಾಗಿದ್ದ ₹1.40 ಲಕ್ಷ ಮೌಲ್ಯದ ಅಸಲಿ ಬಂಗಾರದ ಬೋರಮಾಳ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಜೂ.15ರಂದು ರಾಯಬಾಗ ಪಟ್ಟಣದ ಮುಧೋಳ ಆಸ್ಪತ್ರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಾದೇವಿ ಎಂಬ ವಯೋವೃದ್ಧ ಮಹಿಳೆಯನ್ನು ಆರೋಪಿಗಳು ನಕಲಿ ಬಂಗಾರದ ಸರ ತೋರಿಸಿ ಮಾತಿನಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ, ಅವರ ಗಮನವನ್ನು ಬೇರೆಡೆ ಸೆಳೆದು, ಕೊರಳಲ್ಲಿದ್ದ ಅಸಲಿ ಬಂಗಾರದ ಬೋರಮಾಳ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ಅಥಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ರಾಯಬಾಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಎಂ.ಡಫೀನ್, ಪಿಎಸ್‌ಐ ಶಿವಾನಂದ ಮನ್ನಿಕೇರಿ ಹಾಗೂ ಸಿಬ್ಬಂದಿಯ ತಾಂತ್ರಿಕ ಮತ್ತು ಕ್ಷೇತ್ರಮಟ್ಟದ ತನಿಖೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಅಂತರ-ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಚಕರನ್ನು ಶೀಘ್ರವೇ ಬಂಧಿಸಿ ಮುದ್ದೆಮಾಲು ವಶಪಡಿಸಿಕೊಂಡ ರಾಯಬಾಗ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಶ್ಲಾಘಿಸಿದ್ದು, ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.