ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಮಹಾರಾಷ್ಟ್ರ ಏಕೀರಣ ಸಮಿತಿ ಪುಂಡರ ಪುಂಡಾಟ ಖಂಡಿಸಿ ಶುಕ್ರವಾರ ರಾತ್ರಿ ಕರ್ನಾಟಕ ನವನಿರ್ಮಾಣ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಐಮಂಗಲ ಗುಯಿಲಾಳ್ ಟೋಲ್ ಬಳಿ ಬೆಂಗಳೂರು ಮುಂಬೈಯ ಮಹಾರಾಷ್ಟ್ರ ಸಾರಿಗೆ ವಾಹನ ಚಾಲಕ ಹರಿ ಜಾಧವ್ ಹಾಗೂ ವಾಹನಕ್ಕೆ ಮಸಿ ಬಳಿದು ಪ್ರತಿಭಟಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಬೆಂಗಳೂರಿನಿಂದ ಮುಂಬೈ ಕಡೆ ಸಾಗುತ್ತಿದ್ದ ಮಹಾರಾಷ್ಟ್ರ ಸರ್ಕಾರಿ ಬಸ್ ಗುಯಿಲಾಳ್ ಟೋಲ್ ದಾಟಿ ಚಿತ್ರದುರ್ಗದ ಕಡೆ ತೆರಳುತ್ತಿದ್ದಾಗ ಕರ್ನಾಟಕ ನವ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಬಸ್ ನಿಲ್ಲಿಸಿ ಚಾಲಕನ ಮುಖಕ್ಕೆ, ಬಟ್ಟೆಗೆ ಮಸಿ ಸ್ಪ್ರೇ ಮಾಡಿದ್ದಾರೆ. ನಂತರ ಬಸ್‌ಗೆ, ನಂಬರ್ ಪ್ಲೇಟ್‌ಗೆ, ಗಾಜಿಗೆ ಸೇರಿದಂತೆ ಬಸ್ಸಿನ ಉಳಿದ ಕಡೆಯೆಲ್ಲಾ ಕಪ್ಪು ಬಣ್ಣದ ಸ್ಪ್ರೇ ಮಾಡಿ ಬಸ್ಸಿನ ಮೇಲೆ ಜೈ ಕರ್ನಾಟಕ ಎಂದು ಬರೆದಿದ್ದಾರೆ.
ಬಸ್ ಚಾಲಕ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಐಮಂಗಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ, ಪ್ರಯಾಣಕ್ಕೆ ಅಡ್ಡಿಪಡಿಸಿರುವುದರ ಜೊತೆಗೆ ಸರ್ಕಾರಿ ಬಸ್‌ಗೆ ಕಪ್ಪು ಬಣ್ಣ ಸ್ಪ್ರೇ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ. ಚಾಲಕ ಹರಿ ಜಾಧವ್ ನೀಡಿದ ದೂರಿನನ್ವಯ ಕನ್ನಡಪರ ಸಂಘಟನೆಯ ಇಬ್ಬರು ಮುಖಂಡರಾದ ಲಕ್ಷ್ಮೀಕಾಂತ್ ಮತ್ತು ತಿಪ್ಪೇಸ್ವಾಮಿ ಅವರನ್ನು ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. 189(2), 191(2), 126(2), 132, 115(2), 324(4), 190 ಕಲಂ ಅಡಿ ಕೇಸ್ ದಾಖಲಾಗಿದೆ. ಬೆಳಗಾವಿಯಲ್ಲಿ ಮರಾಠಿ ಪುಂಡರ ಪುಂಡಾಟಿಕೆ ಖಂಡಿಸಿ ಈ ರೀತಿ ಮಸಿ ಬಳಿದು ಪ್ರತಿಭಟನೆ ನಡೆಸಲಾಗಿದೆ ಎನ್ನಲಾಗಿದೆ.