ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಮಹಿಳೆಯೊಬ್ಬಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಮಾಲೂರು-ಕೋಲಾರ ರಸ್ತೆಯ ಹುಂಗೆನಹಳ್ಳಿ ಗೇಟ್ ಬಳಿ ಮಹಿಳೆಯ ಶವವನ್ನು ಬಿಸಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.ಚಮ್ಮಾಳೆ ಗ್ರಾಮದ ತಿಮ್ಮೇಗೌಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಾರೋ ಬಂಡೆಯ ಮುನಿಯಪ್ಪ ಬಂಧಿತರು. ನಂಬಿಗಾನಹಳ್ಳಿ ಗ್ರಾಮದ ಲಕ್ಷ್ಮಿ (೩೯) ಮೃತ ದುರ್ದೈವಿ.
ಘಟನೆ ವಿವರ: ಸೆ.7ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಮಾಲೂರು ಕೋಲಾರ ರಸ್ತೆಯ ಹುಂಗೆನಹಳ್ಳಿ ಗೇಟ್ ಬಳಿ ಮಹಿಳೆಯ ಶವವೊಂದು ಕಂಡು ಸಾರ್ವಜನಿಕರು ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮಹಿಳೆಯ ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದರು. ನಂತರ ಪೊಲೀಸ್ ಆರಕ್ಷಕ ನಿರೀಕ್ಷಕ ವಸಂತ ಅವರು ಎಸ್ಪಿ ಡಿ.ವೈ.ಎಸ್.ಪಿ ಮಾರ್ಗದರ್ಶನದಂತೆ ೨ ತಂಡ ರಚಿಸಿ ಪ್ರಕರಣವನ್ನು ತನಿಖೆ ಕೈಗೊಂಡಿದ್ದರು. ಬಡ್ಡಿ ವ್ಯವಹಾರ ನಡೆಸುತ್ತಿದ್ದ ಮೃತ ಮಹಿಳೆಯ ವ್ಯವಹಾರ ನಡೆಸಿದವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇಬ್ಬರ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿದ್ದರು.ಮೈಸೂರಿನ ಶಕ್ತಿನಗರದಲ್ಲಿ ಆರೋಪಿಗಳಾದ ತಿಮ್ಮೇಗೌಡ, ಮುನಿಯಪ್ಪ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ನಂಬಿಗಾನಹಳ್ಳಿ ಗ್ರಾಮದ ಲಕ್ಷ್ಮಿ ಎಂಬುವರು ನಮಗೆ 9 ಲಕ್ಷ ರು. ನೀಡಿದ್ದಳು. ಹಣಕ್ಕೆ ಬಡ್ಡಿ ಹಾಗೂ ಅಸಲು ನೀಡುವಂತೆ ನಮ್ಮ ಮೇಲೆ ಒತ್ತಡ ಏರಿದ್ದರಿಂದ ದೊಡ್ಡ ಕಡುತೂರು ಗ್ರಾಮದ ಬಳಿ ಬಂದರೆ ನಿಮಗೆ ಕೊಡಬೇಕಾದ ಹಣವನ್ನು ನೀಡುವುದಾಗಿ ಕರೆದುಕೊಂಡು ಹೋಗಿ ತೋಪಿನಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ ಸ್ವಿಪ್ ಕಾರಿನಲ್ಲಿ ಹುಂಗೆನಹಳ್ಳಿ ಗೇಟ್ ಬಳಿ ಹಾಕಿ ಅಪಘಾತವೆಂದು ಬಿಂಬಿಸಲು ಮುಂದಾಗಿದ್ದೇವು ಎಂದು ಆರೋಪಿಗಳು ಹೇಳಿದ್ದಾರೆ. ದುಷ್ಕೃತ್ಯ ಮಾಡಿದ್ದಾರೆ. ಈ ಇಬ್ಬರು ಆರೋಪಿಗಳು ಈ ಹಿಂದೆ ಕೊಲೆಯ ಪ್ರಕರಣದಲ್ಲಿ ಆರೋಪಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಇಬ್ಬರ ಮಧ್ಯ ಸ್ನೇಹ ಬೆಳೆದಿದೆ ಎಂದು ಇನ್ಸ್‌ಪೆಕ್ಟರ್ ವಸಂತ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಎಎಸ್‌ಐಗಳಾದ ಆನಂದ್, ರಮೇಶ್, ಸಿಬ್ಬಂದಿ ಅಶೋಕ್, ಮೂರ್ತಿ, ಮೋಹನ್, ವೆಂಕಟೇಶ್, ಕೋದಂಡಪಾಣಿ, ರೇಣುಪ್ರಸಾದ್, ಚಾಲಕ ಆಂಜಿನಪ್ಪ ಭಾಗವಹಿಸಿದ್ದರು.