ಜನರ ಪರಸ್ಪರ ಸಹಕಾರದೊಂದಿಗೆ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ

| Published : Sep 13 2024, 01:30 AM IST

ಜನರ ಪರಸ್ಪರ ಸಹಕಾರದೊಂದಿಗೆ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ.

ಬಳ್ಳಾರಿ: ಜಿಲ್ಲೆಯ ಸಮುದಾಯದಲ್ಲಿ ಜನರ ಪರಸ್ಪರ ಸಹಕಾರದೊಂದಿಗೆ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿ ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ಜಿ.ಪಂ.ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಫೀಡ್‌ಬ್ಯಾಕ್ ಫೌಂಡೇಶನ್ ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜೆಜೆಎಂ ಅನುಷ್ಠಾನದ ಬಗ್ಗೆ ಗುರುವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಹೀಗಾಗಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿಗಳು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಯೋಜನೆಯ ಬಗ್ಗೆ ಕಾರ್ಯಗಾರದಲ್ಲಿ ಪಡೆದುಕೊಂಡ ಸಮಗ್ರ ವಿವರದೊಂದಿಗೆ ಕಾರ್ಯ ಯೋಜನೆ ರೂಪಿಸಿಕೊಂಡು ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದರು.

ಬೆಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪಕಾಯದರ್ಶಿ ಜಾಫರ್ ಶರೀಫ್ ಸುತಾರ ಅವರು ಮಾತನಾಡಿ, ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕಾರ್ಯನಿರ್ವಹಿಸುವುದು ಜವಾಬ್ದಾರಿಯಾಗಿದೆ ಎಂದರು.

ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಅನುಷ್ಠಾನವಾಗುತ್ತಿರುವ ಕಾಮಗಾರಿಗಳ ಬಗ್ಗೆಯು ಸಂಪೂರ್ಣವಾದ ಮಾಹಿತಿ ಹೊಂದಿರಬೇಕು. ಯೋಜನೆಯ ಬಗ್ಗೆ ಯಾವುದೇ ನ್ಯೂನತೆಗಳಿದ್ದರೆ ಸಾಧ್ಯವಾದಷ್ಟು ತಮ್ಮ ಹಂತದಲ್ಲಿಯೇ ಬಗೆಹರಿಸಲು ಶ್ರಮಿಸಬೇಕು. ಅದೇರೀತಿ ಯೋಜನೆಯ ಮಹತ್ವವನ್ನು ತಿಳಿಸಿ ಆ ಯೋಜನೆಯು ಅನುಷ್ಠಾನ ಮಟ್ಟದಲ್ಲಿ ಎಲ್ಲರ ಜೋತೆ ಸೇರಿ ಕೆಲಸ ಮಾಡಿದರೆ ಮಾತ್ರ ಈ ಯೋಜನೆಯು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯ ಹೆಚ್‌ಆರ್‌ಡಿ ಸಮಾಲೋಚಕ ಜಗದೀಶ.ಸಿ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ತರಬೇತಿ ನೀಡಿದರು.

ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಚಾರ್ಯ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಭಾರಿ ಯೋಜನಾ ನಿರ್ದೇಶಕ ವಿನೋದ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಎಚ್.ಇಂಧುದಾರ್, ಗುರುಗಾವ್‌ನ ಫೀಡ್ ಬ್ಯಾಕ್ ಫೌಂಡೇಶನ್‌ನ ಸಿಇಒ ಅಜಯ್ ಸೀನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.