ಕಿರಣ ಎಮ್.ಕೆ-1 ಯುದ್ಧ ವಿಮಾನ ಆಗಮನ

| Published : Aug 05 2025, 12:30 AM IST

ಸಾರಾಂಶ

ಜಿಲ್ಲೆಯ ಯುವಕರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುವ ಉದ್ದೇಶದಿಂದ ನಿಷ್ಕ್ರಿಯ ಯುದ್ಧ ಟ್ಯಾಂಕರ್‌ ಶಿವಮೊಗ್ಗಕ್ಕೆ ಆಗಮಿಸಿತ್ತು. ಈಗ ಭಾರತೀಯ ವಾಯು ಸೇನೆ ಬಳಸುತ್ತಿದ್ದ ಕಿರಣ ಎಮ್.ಕೆ-1 ನಿಷ್ಕ್ರಿಯ ಯುದ್ಧ ತರಬೇತಿ ವಿಮಾನ ಕೂಡ ಸೋಮವಾರ ನಗರಕ್ಕೆ ಆಗಮಿಸಿದೆ.

ಶಿವಮೊಗ್ಗ: ಜಿಲ್ಲೆಯ ಯುವಕರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುವ ಉದ್ದೇಶದಿಂದ ನಿಷ್ಕ್ರಿಯ ಯುದ್ಧ ಟ್ಯಾಂಕರ್‌ ಶಿವಮೊಗ್ಗಕ್ಕೆ ಆಗಮಿಸಿತ್ತು. ಈಗ ಭಾರತೀಯ ವಾಯು ಸೇನೆ ಬಳಸುತ್ತಿದ್ದ ಕಿರಣ ಎಮ್.ಕೆ-1 ನಿಷ್ಕ್ರಿಯ ಯುದ್ಧ ತರಬೇತಿ ವಿಮಾನ ಕೂಡ ಸೋಮವಾರ ನಗರಕ್ಕೆ ಆಗಮಿಸಿದೆ.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಕಿರಣ ಎಮ್.ಕೆ-1 ನಿಷ್ಕ್ರಿಯ ಯುದ್ಧ ತರಬೇತಿ ವಿಮಾನವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಬರಮಾಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಈ ಕಿರಣ್ ವಿಮಾನವನ್ನು ಶಿವಮೊಗ್ಗಕ್ಕೆ ನೀಡಲು ಮಂಜೂರಾತಿ ನೀಡಿದ್ದಾರೆ. ಇದು ನನಗೆ ತುಂಬ ಸಂತಸ ತಂದಿದೆ. ಈ ವಿಮಾನ ಒಂದು ಕಾಲದಲ್ಲಿ ನಮ್ಮ ವಾಯುಪಡೆಯ ಪೈಲಟ್‌ಗಳಿಗೆ ತರಬೇತುದಾರ ಆಗಿತ್ತು. ಈ ವಿಮಾನದ ಸೇಪರ್ಡೆ ನಮ್ಮ ಯುವಕರನ್ನು ಪ್ರೇರೇಪಿಸಲು, ಸಶಸ್ತ್ರ ಪಡೆಗಳನ್ನು ಗೌರವಿಸಲು ಮತ್ತು ಮಲೆನಾಡಿನ ಹೆಬ್ಬಾಗಿಲಾದ ನಮ್ಮ ಸ್ಮಾರ್ಟ್ ಸಿಟಿಯ ಹೆಮ್ಮೆ ಹೆಚ್ಚಿಸುತ್ತದೆ ಎಂದರು.

ಈ ವಿಮಾನವನ್ನು ಹಿಂದುಸ್ಥಾನ್ ಏರೊನಾಟಿಕಲ್ ಲಿಮಿಟೆಡ್‌ನಿಂದ ಭಾರತೀಯ ವಾಯಪಡೆಗಾಗಿ ಅಭಿವೃದ್ಧಿಪಡಿಸಿದೆ. ಇದನ್ನು ನೌಕಾಪಡೆಯು 1963ರಿಂದ ತರಬೇತಿಗೆ ಬಳಕೆ ಮಾಡಲಾಗುತ್ತಿತ್ತು. ಈ ವಿಮಾನ ಆರ್ಮ್ಸ್ಟ್ರಾಂಗ್ ಸಿಡ್ಡೆಲಿ ವೈಪರ್ ಮಾದರಿಯ ಎಂಜಿನ್ ಹೊಂದಿದೆ ಎಂದು ತಿಳಿಸಿದರು.ಈ ಮಾದರಿಯ ಮೊದಲ ವಿಮಾನ ಸೆ.4, 1964ರಲ್ಲಿ ಹಾರಾಟ ಆರಂಭಿಸಿದೆ. ಈ ವಿಮಾನ 50 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ವಿಮಾನವು 10.60 ಮೀಟರ್ ಉದ್ದವಿದ್ದು, 10.70 ಮೀ. ಅಗಲದ ರೆಕ್ಕೆಗಳನ್ನು ಹೊಂದಿದೆ. 3.64 ಮೀ.ಎತ್ತರ, 2,560 ಕೆಜಿ. ಭಾರ ಇದೆ. ಗರಿಷ್ಠ ಉಡ್ಡಯನ ತೂಕ 4,235 ಕೆಜಿ ಇದೆ. 1,137 ಲೀ. ಇಂಧನ ಸಾಮರ್ಥ್ಯ ಹೊಂದಿದ್ದು ಗರಿಷ್ಠ ವೇಗ ಸಮುದ್ರ ಮಟ್ಟದಲ್ಲಿ ಗಂಟೆಗೆ 695 ಕಿ.ಮೀ. ಹಾಗೂ 324 ಕಿಮೀ ಕ್ರೂಸ್ ವೇಗ ಹೊಂದಿದೆ. ಇದೇ ಮಾದರಿಯ ವಿಮಾನಗಳು ದೇಶ ವಿದೇಶದಲ್ಲಿ ವೈಮಾನಿಕ ಪ್ರದರ್ಶನ ನೀಡಿವೆ ಎಂದು ಮಾಹಿತಿ ನೀಡಿದರು.ಈಗ ಅದು ವಾಯುಪಡೆಯ ಪಟ್ಟಿಯಿಂದ ನಿಷ್ಕ್ರಿಯಗೊಂಡಿದ್ದು, ಯುವಕರಲ್ಲಿ ಯುದ್ಧದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಫ್ರೀಡಂ ಪಾರ್ಕ್‌ನಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ನಾನು ಈಗಾಗಲೇ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ್ದು, ಅವರ ಸಿ.ಎಸ್.ಆರ್. ಫಂಡ್ ನಲ್ಲಿ ಆರ್ಥಿಕ ಸಹಾಯ ನೀಡಲು ಅವರು ಒಪ್ಪಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಆ ಹಣ ಬಂದರೆ ಒಂದಿಷ್ಟು ಅಭಿವೃದ್ಧಿ ಕಾಣಲಿದೆ ಎಂದರು.

ಅತ್ಯಂತ ದೊಡ್ಡದಾದ ಈ ಸ್ಥಳವನ್ನು ನಗರದ ಮಧ್ಯದಲ್ಲಿ ಪಡೆಯಲು 24 ಗಂಟೆಯೊಳಗೆ ಪೊಲೀಸ್ ಹಾಗೂ ಬಂಧಿಖಾನೆ ಇಲಾಖೆಯ ಅಧಿಕಾರಿಗಳೊಂದಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮವಹಿಸಿ ಇದನ್ನು ಪಡೆದಿದ್ದರು. ಈಗ ಇದು ನಗರದ ಮಧ್ಯೆ ವಿಶಾಲ ಮೈದಾನ ನಾಗರಿಕ ಬಳಕೆಗೆ ಲಭ್ಯವಾಗಿದ್ದು, ಇದರ ಸಂಪೂರ್ಣ ಅಭಿವೃದ್ಧಿ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.ನಿವೃತ್ತ ಸೈನಿಕ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಿರೇಮಠ್, ಮಾಲತೇಶ್, ರಾಜೇಶ್ ಕಾಮತ್, ಇತರರು ಇದ್ದರು.

ಶೀಘ್ರದಲ್ಲೇ ಸಿಗಂದೂರು ನೂತನ ಸೇತುವೆ ಬಳಿ ನೌಕಾಪಡೆಯ ಹಡಗನ್ನು ಕೊಡಲು ಕೇಂದ್ರ ರಕ್ಷಣಾ ಸಚಿವರು ಒಪ್ಪಿದ್ದು, ಅಲ್ಲಿ ಕೂಡ ಅದಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಅಲ್ಲಿ ಸ್ಥಾಪಿಸಲಾಗುವುದು. ಹಾಗೂ ಪ್ರವಾಸಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗುವುದು.

- ಬಿ.ವೈ.ರಾಘವೇಂದ್ರ, ಸಂಸದ