ಗಮನ ಸೆಳ‍ೆದ ಸಂವಿಧಾನ ಜಾಗೃತಿ ಮರಳು ಶಿಲ್ಪ

| Published : Feb 15 2024, 01:34 AM IST

ಸಾರಾಂಶ

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಮರಳು ಕಲಾಕೃತಿಯನ್ನು ಅನಾವರಣಗೊಳಿಸಿದರು. ಕಡಲ ಕಿನಾರೆಗೆ ಆಗಮಿಸಿದ ಸಾವಿರಾರು ಮಂದಿ ಪ್ರವಾಸಿಗರನ್ನು ಈ ಕಲಾಕೃತಿಯು ಮನಸೆಳೆಯಿತು.

ಮಲ್ಪೆ: ಉಡುಪಿ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಭಾರತದ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಆರ್ಟಿಸ್ಟ್ ಫೋರಂನ ಕಲಾವಿದರಾದ ಶ್ರಿನಾಥ್ ಮಣಿಪಾಲ ರವಿ ಹಿರೇಬೆಟ್ಟು, ಪುರಂದರ್ ಮಲ್ಪೆ ಇವರ ಸಹಭಾಗಿತ್ವದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ಬೃಹತ್ ಮರಳು ಶಿಲ್ಪವನ್ನು ರಚಿಸಿದರು.

ಈ ಕಲಾಕೃತಿಯಲ್ಲಿ ಬೃಹತ್ ಸಂವಿಧಾನ ಪುಸ್ತಕ, ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಭಾರತದ ಸಂವಿಧಾನ ಪೀಠಿಕೆಯನ್ನು ರಚಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಮರಳು ಕಲಾಕೃತಿಯನ್ನು ಅನಾವರಣಗೊಳಿಸಿದರು. ಕಡಲ ಕಿನಾರೆಗೆ ಆಗಮಿಸಿದ ಸಾವಿರಾರು ಮಂದಿ ಪ್ರವಾಸಿಗರನ್ನು ಈ ಕಲಾಕೃತಿಯು ಮನಸೆಳೆಯಿತು.

ಕುಕ್ಕುಂದೂರು: ಸಂವಿಧಾನಜಾಗೃತಿ ಜಾಥ ಕಾರ್ಯಕ್ರಮ

ಕಾರ್ಕಳ: ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸಂವಿಧಾನಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಯಂತಿನಗರ, ಸರಕಾರಿ ಫ್ರೌಢಶಾಲೆ ನಕ್ರೆ, ಕುಕ್ಕುಂದೂರು, ಮತ್ತು ಕೆಎಂಇಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ ಸಂವಿಧಾನದ ಜಾಗೃತಿ ಜಾಥದ ಕುರಿತು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖಾ ಸಿಬ್ಬಂದಿ ಜಯಂತಿ ಜೆ. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ಏರ್ಪಡಿಸಲಾದ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ., ಕಾರ್ಕಳ ಪಂಚಾಯಿತಿ ಅಧ್ಯಕ್ಷೆ ಉಷಾ ಕೆ., ಕಂದಾಯ ಇಲಾಖೆ ಉಪ ತಹಶೀಲ್ದಾರ ಮಂಜುನಾಥ ನಾಯಕ್ ಕಾರ್ಕಳ ಪಂಚಾಯತ್ ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯವರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಿರ್ಮಲ ಸ್ವಾಗತಿಸಿ, ನಿರೂಪಿಸಿದರು. ಪಿಡಿಒ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.